ಪ್ರೀತಿಯಾಗುವುದು ಪ್ರಥಮ ನೋಟದಲ್ಲಲ್ಲವಂತೆ, ಮತ್ತೆ ?

ಮಂಗಳವಾರ, 3 ಜನವರಿ 2017 (10:52 IST)
ಪ್ರೀತಿ ಹುಟ್ಟುವುದು ಪ್ರಥಮ ನೋಟದಲ್ಲಿ ಅನ್ನುತ್ತಾರೆ. ಆದರೆ ಇತ್ತೀಚಿಗೆ ನಡೆಸಲಾದ ಸಂಶೋಧನೆಯೊಂದು ಇದು ಸುಳ್ಳೆನ್ನುತ್ತಿದೆ. ಕನಿಷ್ಠ ನಾಲ್ಕು ಬಾರಿಯ ಭೇಟಿ ಎರಡು ಹೃದಯದಲ್ಲಿ ಪ್ರೀತಿಯ ಕಚಗುಳಿ ಕುಚುಗುಡುತ್ತದೆ ಎನ್ನುತ್ತದೆ ಈ ಅಧ್ಯಯನದ ವರದಿ.

ಕೆಲವು ಜನರ ಮುಖದ ಚಿತ್ರವನ್ನು ನೀಡಲಾಯಿತು. ಕೊಡಲಾದ ಭಾವಚಿತ್ರಗಳ ಮೇಲೆ ಅಧ್ಯಯನದಲ್ಲಿ ಭಾಗವಹಿಸಿದವರಿಗೆ ಎಷ್ಟರ ಮಟ್ಟಿಗೆ ಆಕರ್ಷಣೆಯಾಗಿದೆ ಎನ್ನುವುದನ್ನು ತಿಳಿದುಕೊಳ್ಳಲು ಅವರ ಮೆದುಳನ್ನು ಕಂಪ್ಯೂಟರ್‌ಗೆ ಸಂಪರ್ಕಿಸಲಾಯಿತು.
 
ಬಳಿಕ ಎರಡನೆಯ ಬಾರಿಗೆ ಮತ್ತೆ ಆ ಭಾವಚಿತ್ರಗಳನ್ನು ತೋರಿಸಲಾಯಿತು. ಅದರಲ್ಲಿ ಅತಿ ಹೆಚ್ಚು ಆಕರ್ಷಿಸಿದ ಮುಖಗಳನ್ನು ಗುರುತಿಸಲಾಯಿತು.
 
ಮೂರನೆಯ ಬಾರಿಗೆ ಇದನ್ನು ಮರುಕಳಿಸಿದಾಗ ಆಕರ್ಷಣೆ ಮತ್ತು ಹೆಚ್ಚಿತ್ತು ಮತ್ತು ನಾಲ್ಕನೆಯ ಬಾರಿಗೆ ಅದು ಅತ್ಯುನ್ನತವಾಗಿತ್ತು ಎಂದು ಸಂಶೋಧಕರು ಹೇಳಿದ್ದಾರೆ.
 
ಈ ಅಧ್ಯಯನಕ್ಕೊಳಪಟ್ಟವರ ಮೆದುಳಿನ ಉತ್ಸಾಹ ಮತ್ತು ಸಂತೋಷ ಕೇಂದ್ರಗಳ ಸುತ್ತ ಹೆಚ್ಚುವರಿ ಚಟುವಟಿಕೆಗಳನ್ನು ತೋರಿಸಿರುವುದನ್ನು ಮಾನಿಟರ್ ತೋರಿಸಿತು.
 
"ಜನರು ಒಂದಕ್ಕಿಂತ ಹೆಚ್ಚು ಭೇಟಿಯ ಬಳಿಕ ಆಕರ್ಷಣೆಯನ್ನು ಬೆಳೆಸಿಕೊಳ್ಳುತ್ತಾರೆ. ಆರಂಭಿಕ ಭೇಟಿಯಲ್ಲಿ ಈ ಆಕರ್ಷಣೆ ಇಲ್ಲದಿದ್ದರೂ ಇದು ಸಾಧ್ಯವಾಗಬಹುದು ಎಂಬುದು ಆಶ್ಚರ್ಯಕರ", ಎಂದು ಹ್ಯಾಮಿಲ್ಟನ್ ಕಾಲೇಜಿನ ಮನಶ್ಶಾಸ್ತ್ರಜ್ಞ  ರವಿ ಥಿರುಚಸೆಲ್ವಂ ಹೇಳಿದ್ದಾರೆ. 
 
"ಕಾಮದೇವನ ಬಾಣ ಪ್ರಯೋಗವಾಗುವುದು ನಿಧಾನ. ಪುನರಾವರ್ತಿತ ಭೇಟಿ ಆಕರ್ಷಣೆಯಲ್ಲಿ ನಿಧಾನವಾದ ಬದಲಾವಣೆಗೆ ಕಾರಣವಾಗಬಹುದು", ಎಂದು ಅವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ