ನಾಯಿ ಸತ್ತಿತ್ತೆಂದು ತಲೆ ಬೋಳಿಸಿಕೊಂಡು ತಿಥಿ ಆಚರಿಸಿದ ಕುಟುಂಬ

ಗುರುವಾರ, 28 ಮೇ 2015 (12:20 IST)
ಮನೆಯ ಸದಸ್ಯನಂತೆ ಸಾಕಿದ್ದ ಪ್ರೀತಿಯ ನಾಯಿಯ ಸಾವಿನಿಂದ ಆಘಾತಕ್ಕೀಡಾಗಿರುವ ಕುಟುಂಬವೊಂದು ಹಿಂದೂ ಸಂಪ್ರದಾಯದಂತೆ ಅದರ ಪುಣ್ಯತಿಥಿಯನ್ನಾಚರಿಸಿ 500 ಜನ ಅತಿಥಿಗಳಿಗೆ ಭಕ್ಷಭೋಜನವನ್ನು ಉಣಬಡಿಸಿದೆ. 

ಈ ಕುರಿತು ಪ್ರತಿಕ್ರಿಯಿಸುವ ಕುಟುಂಬದ ಹಿರಿಯ ಪಪ್ಪು ಚೌಹಾನ್, "ನನಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ನಾವು ಜರ್ಮನ್ ಶೆಫರ್ಡ್ ತಳಿಯ ಹೆಣ್ಣು ನಾಯಿಯೊಂದನ್ನು ಮಗಳಂತೆ ಸಾಕಿದ್ದೆವು.ಪಿಂಕಿ ಎಂಬ ಹೆಸರಿನ ನಾಯಿ ನಮ್ಮ ಕುಟುಂಬದ ಅವಿಭಾಜ್ಯ ಅಂಗವಾಗಿದ್ದಳು. ಕಳೆದ 7 ತಿಂಗಳ ಹಿಂದೆ  ಪಿಂಕಿಗೆ ಲಕ್ವಾ ಹೊಡೆದಿತ್ತು. ಮೇ 14 ರಂದು ಅದು ಪ್ರಾಣ ಬಿಟ್ಟಿತು. 
ಆಕೆಯ ಶವಸಂಸ್ಕಾರವನ್ನು ಹಿಂದೂ ಪದ್ಧತಿಯಂತೆ ಮಾಡಿದೆವು. ನನ್ನ ಮಗ ಸಹ ತಲೆ ಬೋಳಿಸಿಕೊಂಡ", ಎನ್ನುತ್ತಾರೆ. 
 
"ಪಿಂಕಿಯ ಆರೋಗ್ಯ ಸುಧಾರಣೆಯಾಗದ ಕಾರಣಕ್ಕೆ ಆಕೆಗೆ ಇಂಜೆಕ್ಸನ್ ನೀಡಿ ಕೊಲ್ಲೋಣ ಎಂದು ಅದಕ್ಕೆ ಚಿಕಿತ್ಸೆ ನೀಡಿದ್ದ ಪಶುವೈದ್ಯರು ಸಲಹೆ ನೀಡಿದರು. ಆದರೆ ನಾವದಕ್ಕೆ ಒಪ್ಪಲಿಲ್ಲ", ಎಂದು ಕೆಟರಿಂಗ್ ಉದ್ದಿಮೆ ನಡೆಸುವ ರುಕ್ಮಿಣಿ ನಗರದ ನಿವಾಯಿ ಪಪ್ಪು ಹೇಳುತ್ತಾರೆ. 
 
"ಅನಾರೋಗ್ಯ ಪೀಡಿತಳಾದ ಆಕೆಯನ್ನು ನಾವು ಬಹಳ ಮುತುವರ್ಜಿಯಿಂದ ನೋಡಿಕೊಂಡೆವು. ಆಕೆಯ ಸಾವಿನಿಂದ ನಮ್ಮ ಮನೆಯಲ್ಲಿ ಈಗ ಇರುವುದು ಸ್ಮಶಾನ ಮೌನವಷ್ಟೇ", ಎಂದು ಚೌಹಾನ್ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಾರೆ. 

ವೆಬ್ದುನಿಯಾವನ್ನು ಓದಿ