ನವಜಾತ ಶಿಶುವನ್ನು ಮಡಿಲಲ್ಲಿಟ್ಟುಕೊಂಡು ಪರೀಕ್ಷೆ ಬರೆದಳು

ಗುರುವಾರ, 9 ಏಪ್ರಿಲ್ 2015 (11:38 IST)
ಸಾಧಿಸಬೇಕು ಎನ್ನುವ ಹಂಬಲವಿದ್ದವರನ್ನು ಯಾರು, ಯಾವುದು ಕೂಡ ತಡೆಯಲಾರದು ಎನ್ನುವುದಕ್ಕೆ ತಾಜಾ ಉದಾಹರಣೆ ರಾಜಸ್ಥಾನದಲ್ಲಿ ನಡೆದ ಈ ಘಟನೆ. ಝೂಂಝೂನ್‌ನ ಮೋತಿಲಾಲ್ ಕಾಲೇಜಿನಲ್ಲಿ ಓದುತ್ತಿರುವ ಯುವತಿಯೊಬ್ಬಳು ಒಂದು ದಿನದ ನವಜಾತ ಶಿಶುವಿನೊಂದಿಗೆ ಪರೀಕ್ಷೆ ಬರೆದು ಅಚ್ಚರಿಗೆ ಕಾರಣಳಾಗಿದ್ದಾಳೆ. 

ಧನುರಿ ಎಂಬ ಹಳ್ಳಿಯ ನಿವಾಸಿ ಸುರಬೇನಾ ರಾಜಸ್ಥಾನ ವಿಶ್ವವಿದ್ಯಾಲಯದಲ್ಲಿ ಎಮ್ಎ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದು ಪರೀಕ್ಷೆಗೆ ಒಂದು ದಿನ ಮೊದಲು ಗಂಡು ಮಗುವೊಂದಕ್ಕೆ ಜನ್ಮ ನೀಡಿದ್ದಳು. ಆದರೆ ಪರೀಕ್ಷೆ ಬರೆಯಬೇಕೆನ್ನುವ ಹಂಬಲದಿಂದ ಆಕೆ ದೈಹಿಕ ನೋವಿನ ನಡುವೆಯೂ ಮಗುವನ್ನು ಎತ್ತಿಕೊಂಡು ಆಸ್ಪತ್ರೆಯಿಂದ ನೇರವಾಗಿ ಬಂದಿದ್ದು ಪರೀಕ್ಷಾ ಹಾಲ್‌ಗೆ. ಈ ದಿಟ್ಟ ತಾಯಿಗಾಗಿ ಕಾಲೇಜಿನ ಮುಖ್ಯಸ್ಥರು ಪ್ರತ್ಯೇಕ ಕೋಣೆಯೊಂದನ್ನು ವ್ಯವಸ್ಥೆ ಮಾಡಿದ್ದರು. 
 
ಆಕೆಯ ಪತಿ ರಿಯಾಜ್ ಕೂಡ ಅದೇ ಕಾಲೇಜಿನಲ್ಲಿ ಪರೀಕ್ಷೆಯನ್ನೆದುರಿಸಿದ. ಆಕೆಯ ಪ್ರಸವ ನಡೆಸಿದ ಆಸ್ಪತ್ರೆಯವರು ಆಕೆಗೆ ಪರೀಕ್ಷೆಗೆ ಹೋಗಲು ಅನುಮತಿ ನೀಡಲಿಲ್ಲವಾದರೂ ಹಠ ಮಾಡಿಕೊಂಡು ಆಕೆ ಅಲ್ಲಿಂದ ಹೊರಟಳು ಎಂದು ತಿಳಿದು ಬಂದಿದೆ. ಒಂದು ವೇಳೆ ಈ ಬಾರಿ ಪರೀಕ್ಷೆಯನ್ನು ಬರೆಯದಿದ್ದರೆ ಒಂದು ವರ್ಷ ವ್ಯರ್ಥವಾಗುತ್ತದೆ ಎಂಬ ಆತಂಕ ಅವಳಿಗಿತ್ತು. ಆದ್ದರಿಂದ ಅವಳು ಈ ನಿರ್ಧಾರವನ್ನು ತೆಗೆದುಕೊಂಡಳು ಎಂದು ಆಕೆ ಪತಿ ಹೇಳುತ್ತಾನೆ.
 
ಸುರಬೇನಾ ಕಾಲೇಜು ಉಪನ್ಯಾಸಕಿ ಆಗುವ ಕನಸನ್ನು ಹೊತ್ತಿದ್ದಾಳೆ. 

ವೆಬ್ದುನಿಯಾವನ್ನು ಓದಿ