3 ಬಾರಿ ಸಿಎಂ ಸ್ಥಾನ ತಪ್ಪಿದೆ ಅಂತ ಖರ್ಗೆ ಹೇಳಿದ್ಯಾಕೆ?

ಶುಕ್ರವಾರ, 12 ಏಪ್ರಿಲ್ 2019 (18:07 IST)
ನನಗೂ ಮೂರು ಸಲ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಿದೆ. ಆದರೆ ನಾನು ಬಹಿರಂಗವಾಗಿ ಎಲ್ಲೂ ಮಾತನಾಡಿಲ್ಲ. ಹೀಗಂತ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಿರಿಯ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಕಲಬುರ್ಗಿಯ ಪಟ್ಟಣ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಪ್ರಚಾರದ ವೇಳೆ ಹೇಳಿಕೆ ನೀಡಿದ್ದು, ನನಗೂ ಮೂರು ಸಲ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಿದೆ. ಆದರೆ ನಾನು ಬಹಿರಂಗವಾಗಿ ಎಲ್ಲೂ ಮಾತನಾಡಿಲ್ಲ. ನನಗೆ ಪಕ್ಷ ಮತ್ತು ಅದರ ಸಿದ್ಧಾಂತಗಳು ಮುಖ್ಯ. ಆದರೆ ಕಾಂಗ್ರೆಸ್ ಪಕ್ಷದಿಂದ ಹೊರಗೆ ಹೋದವರು ಸಂವಿಧಾನ ವಿರೋಧಿ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಟೀಕೆ ಮಾಡಿದರು.

ಮಂತ್ರಿ ಸ್ಥಾನ ಸಿಕ್ಕಿಲ್ಲ ಎಂದು ಮಾಲಿಕಯ್ಯ ಗುತ್ತೇದಾರ್, ಉಮೇಶ ಜಾಧವ್ ಮತ್ತಿತರರು ಕಾಂಗ್ರೆಸ್ ತೊರೆದಿರುವುದಕ್ಕೆ ಪರೋಕ್ಷ ಟಾಂಗ್ ನೀಡಿದ್ರು. ಕಾಂಗ್ರೆಸ್ ತೊರೆದವರಿಗೆ ಟಾಂಗ್ ಕೊಟ್ಟ ಖರ್ಗೆ, ನನ್ನ ಅಭಿವೃದ್ಧಿ ಕೆಲಸಗಳೇ ನನಗೆ ಗೆಲುವು ತಂದುಕೊಡುತ್ತದೆ. ನನ್ನ ವಿರುದ್ಧ ಹೊರಟರು ತಾವೇ ಸೋತು ಸುಣ್ಣವಾಗಿದ್ದಾರೆ. ಅಂಥವರು ನನ್ನನ್ನು ಸೋಲಿಸುವ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ರು.

ಕಲಬುರ್ಗಿಗೆ ಪ್ರಧಾನಿ ನರೇಂದ್ರ ಮೋದಿ ಬಂದಾಗ ನನ್ನ ಬಗ್ಗೆ ಏನೂ ಮಾತನಾಡಲಿಲ್ಲ. ಆದರೆ ಮೋದಿಯ ಇಲ್ಲಿನ ಮರಿಗಳು ನನ್ನ ಬಗ್ಗೆ ಮಾತನಾಡುತ್ತಿವೆ. ಹೀಗಂತ ಪರೋಕ್ಷವಾಗಿ ತಮ್ಮ ವಿರೋಧಿಗಳಿಗೆ ಮುಟ್ಟಿನೋಡಿಕೊಳ್ಳುವಂತೆ ಖರ್ಗೆ ತಿರುಗೇಟು ನೀಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ