ಈಶಾ ಫೌಂಡೇಶನ್ - ಮಹಾ ಶಿವರಾತ್ರಿ ಭಕ್ತರಿಗೆ ಭಾವಪರಾವಶ ರಾತ್ರಿ
ಭಾನುವಾರ, 19 ಫೆಬ್ರವರಿ 2012 (12:28 IST)
WD
ಇಲ್ಲಿನ ವೆಲೈನ್‌ಗಿರಿ ಪರ್ವತದಲ್ಲಿರುವ ಈಶಾ ಯೋಗ ಕೇಂದ್ರವು ಮಹಾಶಿವರಾತ್ರಿಯ ಪ್ರಯುಕ್ತ (ಸೋಮವಾರ) ಫೆ.20 ರಂದು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಕಾರ್ಯಕ್ರಮಕ್ಕೆ ವಿಶ್ವದ ಎಲ್ಲಾ ಕಡೆಗಳಿಂದ 8 ಲಕ್ಷಕ್ಕೂ ಹೆಚ್ಚು ಭಕ್ತಾಧಿಗಳು ಆಗಮಿಸುವ ನಿರೀಕ್ಷೆಯಿದೆ ಎಂದು ಸಂಸ್ಥೆ ತಿಳಿಸಿದೆ. ಮಹಾಶಿವರಾತ್ರಿಯ ರಾತ್ರಿಯಾದ್ಯಂತ ಸದ್ಗುರುವಿನೊಂದಿಗೆ ಸತ್ಸಂಗ, ಶಕ್ತಿಯುತ ಧ್ಯಾನವನ್ನು ಮಾಡಲಾಗುತ್ತದೆ ಎಂದು ಈಶಾ ಫೌಂಡೇಶನ್ ಹೇಳಿದೆ.
ಇದಲ್ಲದೇ ಹಿಂದೂಸ್ತಾನಿ ದೃಪದ್ ಗಾಯಕ ಪದ್ಮಶ್ರೀ ವಾಸಿಫುದ್ದೀನ್ ಡಾಗರ್‌ರಿಂದ ಹಿಂದೂಸ್ತಾನಿ ಗಾಯನ, ಬಾಲಿವುಡ್‌ನಲ್ಲಿ ತಮ್ಮ ವಿಶಿಷ್ಟ ಧ್ವನಿಯಿಂದ ಗಮನ ಸೆಳೆದಿರುವ ಕೈಲಾಶ್ ಖೇರ್ ಭಕ್ತಿಗೀತೆ ಹಾಡುವ ಮೂಲಕ ಭಕ್ತಾಧಿಗಳನ್ನು ರಂಜಿಸಲಿದ್ದಾರೆ. ಕೈಲಾಶ್ ಖೇರ್‌ರೊಂದಿಗೆ ಕಲೋನಿಯಲ್ ಕಸಿನ್ಸ್ ಎಂದು ಹೆಸರಾಗಿರುವ ಹರಿಹರನ್ ಮತ್ತು ಲೆಸ್ಲಿ ಲೆವೀಸ್ ಸಹ ಕಾರ್ಯಕ್ರಮದಲ್ಲಿ ಭಾಗವಹಿಸುವರೆಂದು ಈಶಾ ಫೌಂಡೇಶನ್ ವಿವರಿಸಿದೆ.
WD
ಮಹಾಶಿವರಾತ್ರಿ ಕಾರ್ಯಕ್ರಮವು ಸಂಜೆ 5.40ಕ್ಕೆ ಧ್ಯಾನಲಿಂಗ ಯೋಗಿಕ್ ಟೆಂಪಲ್‌ನಲ್ಲಿ ಸದ್ಗುರುಗಳ ಪಂಚಭೂತ ಆರಾಧನೆಯ ಮೂಲಕ ಆರಂಭವಾಗುತ್ತದೆ. ನಂತರ ಶಕ್ತ ಧ್ಯಾನದಿಂದ ಕಾರ್ಯಕ್ರಮ ಮುಂದುವರಿಯುತ್ತದೆ. ಶಿವನ ಆರಾಧನೆಗೆ ಆಗಮಿಸಿದ ಭಕ್ತರನ್ನು ರಂಜಿಸುವುದಕ್ಕಾಗಿ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಈಶಾ ಫೌಂಡೇಶನ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಮಹಾಶಿವರಾತ್ರಿಯು ಭಾರತದ ಪ್ರಮುಖ ಮತ್ತು ಹೆಚ್ಚು ಜನರು ಆಚರಿಸುವಂತಹ ಹಬ್ಬವಾಗಿದೆ ಎಂದು ಈಶಾ ಫೌಂಡೇಶನ್ ಹೇಳುತ್ತಾ, ಇಂದಿನ ರಾತ್ರಿಯಂದು ಪರಮಶಿವನ ಧ್ಯಾನ ಮತ್ತು ಪೂಜೆಯಲ್ಲಿ ಭಕ್ತಾಧಿಗಳು ತೊಡಗುವರೆಂದು ಹೇಳಿದೆ.
ಈಶಾ ಫೌಂಡೇಶನ್ ವತಿಯಿಂದ ಭಕ್ತಾಧಿಗಳಿಗಾಗಿ ಶಕ್ತ ಧ್ಯಾನವನ್ನು ಮತ್ತು ಶಿವಭಜನೆಯನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದೆ. ಆಗಮಿಸುವ ಭಕ್ತ ಸಮೂಹಕ್ಕೆ ಉಚಿತ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿದೆ. ಮಹಾಶಿವರಾತ್ರಿಯ ಕಾರ್ಯಕ್ರಮಗಳು ಮರುದಿನ ಮುಂಜಾನೆ 6 ಗಂಟೆಗೆ ಅಂತ್ಯಗೊಳ್ಳುತ್ತವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಪ್ರಚಾರ ಮಾಡಿದೆ.