ಶ್ರಾವಣದ ಕೃಷ್ಣಪಕ್ಷದ 8ನೇ ದಿನವನ್ನು ಕೃಷ್ಣ ಜನ್ಮಾಷ್ಟಮಿಯಾಗಿ ಆಚರಿಸಲಾಗುತ್ತದೆ. ದ್ವಾಪರಯುಗದಲ್ಲಿ ವಿಷ್ಣುವಿನ ಅವತಾರವಾದ ಭಗವಾನ್ ಕೃಷ್ಣನ ಜನನದ ಸ್ಮರಣೆಯಿದು. ಕೃಷ್ಣಾಷ್ಟಮಿಯ ದಿನ ಧಾರ್ಮಿಕ ಉತ್ಸವ ಮತ್ತು ಭಕ್ತಿ ಪರಾಕಾಷ್ಠೆಯನ್ನು ಮುಟ್ಟುತ್ತದೆ. ರಾಕ್ಷಸರನ್ನು ನಿರ್ದಯವಾಗಿ ದಮನ ಮಾಡಿ ಸಕಲ ದುಷ್ಟಶಕ್ತಿಗಳಿಂದ ಮಾನವಕುಲರಕ್ಷಣೆಗೆ ಭಗವಾನ್ ಕೃಷ್ಣ ಭೂಮಿಯ ಮೇಲೆ ಅವತಾರವೆತ್ತಿದ. ಅತಿಶಯ ಗುಣಗಳ ಸಂಪನ್ನನಾದ ಕೃಷ್ಣ ಅತ್ಯಂತ ಪ್ರೀತಿಪಾತ್ರ ದೇವರಾಗಿ ಜನಮೆಚ್ಚುಗೆ ಗಳಿಸಿದ.
ಪೌರಾಣಿಕ ಕಥೆಯ ಪ್ರಕಾರ, ಭಗವಾನ್ ಕೃಷ್ಣನ ಜನನದ ಕಥೆ ಸ್ವಾರಸ್ಯಕರವಾಗಿದೆ. ತನ್ನ ತಂದೆ ಉಗ್ರಸೇನನಿಂದ ರಾಜ್ಯವನ್ನು ಕಸಿದುಕೊಂಡು ಮಥುರಾವನ್ನು ಆಳುತ್ತಿದ್ದ ಕಂಸ ದುಷ್ಟ ರಾಜನಾಗಿದ್ದ. ಅವನ ದುರಾಚಾರಗಳಿಂದ ರಕ್ಷಿಸಿಕೊಳ್ಳಲು ಯಾರಿಗೂ ಸಾಧ್ಯವಾಗಲಿಲ್ಲ. ಕಂಸನ ಸೋದರಿ ದೇವಕಿ ಮತ್ತು ವಸುದೇವನ ವಿವಾಹದ ಬಳಿಕ ಕಂಸ ರಥವನ್ನು ಮುನ್ನಡೆಸುವಾಗ ಅಶರೀರವಾಣಿಯೊಂದು ಕೇಳಿಬರುತ್ತದೆ. ದೇವಕಿಯ ಎಂಟನೆ ಮಗ ನಿನ್ನನ್ನು ಕೊಂದು ನಿನ್ನ ದುರಾಚಾರಕ್ಕೆ ತೆರೆ ಎಳೆಯುತ್ತದೆಂದು ಅಶರೀರವಾಣಿ ಎಚ್ಚರಿಸುತ್ತದೆ.
ತೀವ್ರ ಕ್ಷೋಭೆಗೊಳಗಾದ ಕಂಸ ತನ್ನ ಸೋದರಿ ಮತ್ತು ಭಾವನನ್ನು ಮಥುರಾದ ಯುಮುನಾ ನದಿ ದಂಡೆಗೆ 8 ಮೈಲು ದೂರದ ಗ್ರಾಮದಲ್ಲಿ ಬಂಧಿಯಾಗಿಟ್ಟನು. ದೇವಕಿಗೆ ಪ್ರಥಮ ಪುತ್ರನ ಜನನವಾದ ಕೂಡಲೇ ಕಂಸ ಅದನ್ನು ಬಲಿಕೊಟ್ಟ. ದೇವಕಿಗೆ ಹುಟ್ಟಿದ ಮಕ್ಕಳೆಲ್ಲವಕ್ಕೂ ಅದೇ ಗತಿಯಾಯಿತು. 8ನೇ ಮಗು ಜನನಕ್ಕೆ ಮುಂಚೆ ಅಶರೀರವಾಣಿಯೊಂದು ಕೇಳಿಸಿ, ಅವನ ಸ್ನೇಹಿತ ನಂದನ ಪತ್ನಿಗೆ ಹುಟ್ಟುವ ಮಗು ಮತ್ತು ದೇವಕಿಗೆ ಹುಟ್ಟಲಿರುವ ಮಗುವನ್ನು ವಿನಿಮಯ ಮಾಡುವಂತೆ ಆದೇಶಿಸಿತು.
ದೇವಕಿಗೆ 8ನೇ ಮಗು ಜನಿಸಿದ ಕೂಡಲೇ ದೈವನಿಯಾಮಕವೋ ಎಂಬಂತೆ ಗುಡುಗು, ಸಿಡಿಲಿನಿಂದ ಕೂಡಿದ ಮಳೆಯಾಗುತ್ತದೆ. ಮಗುವಿನ ಆಕ್ರಂದನ ಗುಡುಗಿನ ಶಬ್ದದಲ್ಲಿ ಮುಚ್ಚಿಹೋಗುತ್ತದೆ. ವಸುದೇವ ಮಗುವನ್ನು ಬುಟ್ಟಿಯಲ್ಲಿಟ್ಟು ತಲೆಯ ಮೇಲೆ ಹಿಡಿದು,ತುಂಬಿಹರಿಯುವ ಯುಮುನೆಯಲ್ಲಿ ಸಾಗುತ್ತಾನೆ. ಪವಾಡಸದೃಶವೋ ಎಂಬಂತೆ ಆದಿಶೇಷ ಪ್ರತ್ಯಕ್ಷನಾಗಿ ಮಗುವಿಗೆ ಹೆಡೆಯ ಆಸರೆ ನೀಡಿ ಪ್ರವಾಹದಿಂದ ರಕ್ಷಿಸಿತ್ತಾನೆ. ವಸುದೇವ ಗೋಕುಲಕ್ಕೆ ಮುಟ್ಟಿದಾಗ ಯಶೋದಾ ಆಗತಾನೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದಳು. ಗೋಕುಲದ ರಾಜ ನಂದ ವಸುದೇವನ ಪುತ್ರನನ್ನು ಸ್ವೀಕರಿಸಿ ಬದಲಿಗೆ ತನ್ನ ಪುತ್ರಿಯನ್ನು ಒಪ್ಪಿಸಿದ. ವಸುದೇವ ಹಿಂತಿರುಗಿದ ಕೂಡಲೇ ಚಂಡಮಾರುತದ ಪ್ರಕೋಪ ತಗ್ಗಿತು.
ಬೆಳಕು ಹರಿಯುತ್ತಲೇ, ನವಜಾತ ಶಿಶುವಿನ ಆಕ್ರಂದನ ಗಾಳಿಯಲ್ಲಿ ತೇಲಿಬರುತ್ತದೆ. ಕಂಸ ನೇರವಾಗಿ ಕಾರಾಗೃಹಕ್ಕೆ ಆಗಮಿಸಿ ಮಗುವನ್ನು ಕಂಡ ಕೂಡಲೇ ಮೈಯ ರಕ್ತ ಕುದಿಯುತ್ತದೆ. ಮಗುವನ್ನು ಎತ್ತಿ ಎಸೆಯುತ್ತಾನೆ. ಮಾಯೆಯ ಸ್ವರೂಪಿಯಾದ ಮಗು ಆಕಾಶದಲ್ಲಿ ಅದೃಶ್ಯವಾಗಿ ಗುಡುಗಿನಂಥ ಧ್ವನಿ ಕೇಳಿಬರುತ್ತದೆ. ಕಂಸನ ವಿನಾಶಕಾಲ ಸಮೀಪಿಸಿದೆಯೆಂದು ಎಚ್ಚರಿಸುತ್ತದೆ.
ಪ್ರತಿ ಬಾರಿಯೂ ಕೃಷ್ಣ ತನ್ನ ಅವತಾರದ ಉದ್ದೇಶವನ್ನು ಸಾರ್ಥಕಗೊಳಿಸುತ್ತಾನೆ. ಕಂಸನನ್ನು ಕೊಲ್ಲುತ್ತಾನೆ. ಬೃಂದಾವನದ ಜನರನ್ನು ಅನೇಕ ವಿಘ್ನಗಳಿಂದ ರಕ್ಷಿಸುತ್ತಾನೆ. ದುಷ್ಟ ಶಕ್ತಿಗಳ ವಿರುದ್ಧ ಶಿಷ್ಟ ಶಕ್ತಿಗಳ ಗೆಲುವಿಗೆ ರೂವಾರಿಯಾಗುತ್ತಾನೆ.
ಹಬ್ಬದ ವಾತಾವರಣ:
WD
ಜನ್ಮಾಷ್ಟಮಿ ವಿಷ್ಣುವಿನ ಅವತಾರವಾದ ಕೃಷ್ಣನ ಜನನದ ಆಚರಣೆಯ ಸಂಕೇತವಾಗಿದೆ. ಮಾನವಕುಲದ ಪಾಪಗಳನ್ನು ತೊಳೆಯಲು ಕೃಷ್ಣ ಜನ್ಮವೆತ್ತಿದ. ಕೃಷ್ಣ ಜನ್ಮಾಷ್ಟಮಿಯನ್ನು ಮಥುರಾ ಮತ್ತು ಬೃಂದಾವನದಲ್ಲಿ ಅತ್ಯಂತ ನಲಿವು ಮತ್ತು ಹರ್ಷದಿಂದ ಆಚರಿಸಲಾಗುತ್ತದೆ. ವರ್ಣರಂಜಿತವಾಗಿ ಅಲಂಕೃತವಾದ ನಗರಗಳಲ್ಲಿ ಹಬ್ಬದ ವಾತಾವರಣ ಮೂಡುತ್ತದೆ.
ಮಥುರಾ ಮತ್ತು ಬೃಂದಾವನದ ದೇವಸ್ಥಾನಗಳು ಹೂವುಗಳಿಂದ ಅಲಂಕೃತವಾಗಿ ಭಗವಾನ್ ಕೃಷ್ಣ ಆಭರಣಗಳಿಂದ ಶೋಭಿಸುತ್ತಾನೆ. ಸಂಜೆ ಆರಂಭವಾದ ಕಾರ್ಯಕ್ರಮ ಕೃಷ್ಣನ ಜನನಾವಧಿಯಾದ ಮಧ್ಯರಾತ್ರಿಯ ವೇಳೆ ತಾರಕಕ್ಕೇರುತ್ತದೆ. ಭಜನೆಗಳು , ಹರೆ ರಾಮ ಹರೆ ಕೃಷ್ಣ ಜಪಗಳು ಮಾರ್ದನಿಸುತ್ತವೆ.
ದಕ್ಷಿಣ ಭಾರತದಲ್ಲಿ ಪ್ರಾರ್ಥನೆಗಳಿಂದ, ಭಗ್ತಿಗೀತೆಗಳಿಂದ ಮತ್ತು ಹೂವುಹಣ್ಣುಗಳನ್ನು, ವಿಶೇಷ ಪ್ರಸಾದಗಳನ್ನು ಭಗವಾನ್ ಕೃಷ್ಣನಿಗೆ ಅರ್ಪಿಸುವ ಮೂಲಕ ಜನ್ಮಾಷ್ಟಮಿ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಆ ದಿನ ಜನರಿಗೆ ಉಪವಾಸ, ಮನೆಗಳ ಬಾಗಿಲಿಗೆ ಮಾವಿನ ಎಲೆಗಳ ತೋರಣ ಅಲಂಕರಿಸಿರುತ್ತದೆ. ಮುಂಭಾಗದ ಅಂಗಳದಲ್ಲಿ ಹೂವಿನ ವಿನ್ಯಾಸಗಳನ್ನು ಬಿಡಿಸಲಾಗುತ್ತದೆ. ಮನೆಯೊಳಗೆ ಸಣ್ಣ ಮಂಟಪದಲ್ಲಿ ಕೃಷ್ಣನ ಬೆಳ್ಳಿ ಮೂರ್ತಿಯನ್ನಿಟ್ಟು ಪೂಜಿಸಲಾಗುತ್ತದೆ. ಅಕ್ಕಿ ಹಿಟ್ಟು ಮತ್ತು ನೀರು ಮಿಶ್ರಣದಿಂದ ಕೃಷ್ಣನ ಪುಟ್ಟ ಪುಟ್ಟ ಹೆಚ್ಚೆಯ ಗುರುತುಗಳನ್ನು ಮೂಡಿಸಿ ಕೃಷ್ಣನ ಆಗಮನವನ್ನು ಸಾಂಕೇತಿಕವಾಗಿ ಸೃಷ್ಟಿಸಲಾಗುತ್ತದೆ.
ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ಪುರೋಹಿತರು ಭಗವದ್ಗೀತೆ ಮತ್ತಿತರ ಪವಿತ್ರ ಗ್ರಂಥಗಳನ್ನು ಪಠಿಸುತ್ತಾರೆ. ಮಧ್ಯರಾತ್ರಿ ಚಂದ್ರ ಮೂಡಿದ ಕೂಡಲೇ ಚಕ್ಕುಲಿ, ಮತ್ತು ಉಂಡೆಗಳನ್ನು ಮೂರ್ತಿಗೆ ಅರ್ಪಿಸಲಾಗುತ್ತದೆ. ಭಕ್ರರು ಶಂಖದಿಂದ ಜಲ, ಕ್ಷೀರಾಭಿಷೇಕ ಮಾಡುತ್ತಾರೆ. ಸಮೀಪದ ಗ್ರಾಮಗಳ ದನಗಾಹಿಗಳು ಕೃಷ್ಣನ ಮೂರ್ತಿಗೆ ಜಲ ಮತ್ತು ಕ್ಷೀರದ ಅರ್ಘ್ಯವನ್ನು ಅರ್ಪಿಸುತ್ತಾರೆ. ಮರುದಿನ ನಸುಕಿನ ಜಾವದ ತನಕ ಆಚರಣೆ ನಡೆಯುತ್ತದೆ. ಮರುದಿನ ಶ್ರೀಕೃಷ್ಣ ಲೀಲೋತ್ಸವ. ಅಂದರೆ ಮೊಸರು ಕುಡಿಕೆ ಹಬ್ಬ. ಗೊಲ್ಲರು ಸೇರಿ ಮೊಸರು ಕುಡಿಕೆ ಒಡೆಯುವ ದೃಶ್ಯಾವಳಿಗಳನ್ನು ಎಲ್ಲೆಲ್ಲೂ ಕಾಣಬಬಹುದಾಗಿದೆ.
ಹೀಗೆ ಎರಡು ದಿನ ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯು ಭಕ್ತರ ಮನೆ-ಮನದಲ್ಲಿ ಶ್ರೀಕೃಷ್ಣನ ಲೀಲಾ ಸ್ವರೂಪವನ್ನು ಚಿರಕಾಲ ನೆನಪಿನಲ್ಲುಳಿಯುವಂತೆ ಮಾಡುತ್ತದೆ.