ತಿರುಪತಿ ಬ್ರಹ್ಮೋತ್ಸವ: ಕಲ್ಪವೃಕ್ಷ ವಾಹನೋತ್ಸವ

ಸೋಮವಾರ, 6 ಅಕ್ಟೋಬರ್ 2008 (16:01 IST)
ಶ್ರೀ ವಾರಿ ಬ್ರಹ್ಮೋತ್ಸವದ ನಾಲ್ಕನೇ ದಿನವಾದ ಶನಿವಾರ ತಿರುಮಲ ಬೆಟ್ಟಗಳೊಡೆಯ ವೆಂಕಟೇಶ್ವರನನ್ನು ಕಲ್ಪ ವೃಕ್ಷ ವಾಹನದಲ್ಲಿ ವಿರಾಜಮಾನನಾಗಿ ರಾಜಪಥದಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದಾಗ ನೆರೆದಿದ್ದ ಜನತೆ ಗೋವಿಂದಾ ಗೋವಿಂದಾ ಎನ್ನುತ್ತಾ ಭಕ್ತಿ ಭಾವದಲ್ಲಿ ಮಿಂದು ಪುಳಕಗೊಂಡರು.

ಕಲ್ಪವೃಕ್ಷ ವಾಹನದಲ್ಲಿ ವಿರಾಜಮಾನನಾದ ಶ್ರೀ ವೆಂಕಟೇಶ್ವರನು ನಾಲ್ಕೂ ಬೀದಿಗಳಲ್ಲಿ ದರುಶನ ನೀಡಿದಾಗ ನೆರೆದಿದ್ದ ಭಕ್ತ ಸಮೂಹದ ಕಣ್ಮನ ತುಂಬಿಕೊಂಡು ಪುನೀತ ಭಾವ ತಳೆದರು.

ದೇವಾಸುರರ ಸಮುದ್ರ ಮಥನ ಕಾಲದಲ್ಲಿ ಅಮೃತ ಉತ್ಪತ್ತಿಯಾದ ಸಂದರ್ಭದಲ್ಲಿ ಮಂದರ ಪರ್ವತದ ಮೇಲೆ ಆದಿಶೇಷನು ತನ್ನ ಹಿಡಿತ ಬಿಗಿಗೊಳಿಸಿದಾಗ ಕಲ್ಪವೃಕ್ಷವು ಉದಿಸಿತು. ಕಲ್ಪವೃಕ್ಷದ ಕೆಳಗೆ ಆಶ್ರಯ ಪಡೆದವರೆಲ್ಲರೂ ಯಾವುದೇ ರೀತಿಯ ತೊಂದರೆ, ಬಡತನದಿಂದ ಮುಕ್ತರಾಗಿರುತ್ತಾರೆ ಎನ್ನುತ್ತದೆ ಭಾಗವತ ಪುರಾಣ.

ಕಲ್ಪವೃಕ್ಷ ವಾಹನೋತ್ಸವವು ಪರಿಸರ, ಹಸಿರು ಕಾಡು, ಮಾಲಿನ್ಯ ನಿವಾರಣೆಗೆ ನಾವು ನೀಡಬೇಕಾಗಿರುವ ಮಹತ್ವದ ಸಂಕೇತವಾಗಿದೆ. ಕಲ್ಪಿಸಿದ್ದನ್ನು ಕೊಡಬಲ್ಲ ಸಾಮರ್ಥ್ಯವಿರುವ ದೇವರು ಎಂದೇ ವೆಂಕಟೇಶ್ವರನನ್ನು ನುತಿಸಲಾಗುತ್ತದೆ.

ಕಲ್ಪವೃಕ್ಷ ವಾಹನವು ಹಚ್ಚ ಹಸಿರಿನಿಂದ ಕೂಡಿ ಭಕ್ತರ ಮನದಲ್ಲಿ ವಿದ್ಯುತ್ ಸಂಚಾರವುಂಟು ಮಾಡುತ್ತದೆ. ಇದರಲ್ಲಿ ಕಲ್ಪವೃಕ್ಷ ಮಾತ್ರವಲ್ಲದೆ, ಕಾಮಧೇನು ಮತ್ತು ಚಿಂತಾಮಣಿಯ ಅಲಂಕಾರಗಳೂ ಕಂಗೊಳಿಸುತ್ತವೆ.

ವೆಬ್ದುನಿಯಾವನ್ನು ಓದಿ