'ನಾಡ ಹಬ್ಬ'ವಾಗಿ ಶ್ರೀಕೃಷ್ಣ ಜಯಂತಿ

PR
ಆಗೋಸ್ಟ್ 13ರಿಂದ ಸೆಪ್ಟೆಂಬರ್‌ವರೆಗೆ ನಡೆಯಲಿರುವ ಶ್ರೀಕೃಷ್ಣ ಜಯಂತಿ ಹಾಗೂ ಶ್ರೀಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಸುಮಾರು ಒಂದು ತಿಂಗಳ ಕಾಲ ನಡೆಯಲಿರುವ ಉತ್ಸವಕ್ಕಾಗಿ ಉಡುಪಿ ಶ್ರೀಕೃಷ್ಣಮಠದಲ್ಲಿ ಪೂರ್ವಸಿದ್ಧತಾ ಕಾರ್ಯದೊಂದಿಗೆ ಉತ್ಸವದ ವಿಧಿ-ವಿಧಾನಗಳು ಆರಂಭಗೊಂಡಿದೆ.

ಆಗೋಸ್ಟ್ 13ರ ಶ್ರೀಕೃಷ್ಣ ಜಯಂತಿಯನ್ನು ಚಾಂದ್ರಮಾನ ಹಾಗೂ ಸೆಪ್ಟೆಂಬರ್ 11ರ ಉತ್ಸವವನ್ನು ಸೌರಮಾನ ವ್ಯವಸ್ಥೆಯಲ್ಲಿ ಆಚರಿಸಲು ಸಿದ್ಧತೆ ನಡೆಸಲಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ವಿವರಿಸಿದ್ದಾರೆ.

ನಗರದಲ್ಲಿನ ಶ್ರೀಕೃಷ್ಣ ದೇವಾಲಯದಲ್ಲಿ ತಿಂಗಳು ಕಾಲ ನಡೆಯಲಿರುವ ಈ ಎರಡೂ ಪ್ರಸಿದ್ಧ ಉತ್ಸವವನ್ನು ನಾಡಹಬ್ಬವನ್ನಾಗಿ ಆಚರಿಸಲು ಪರ್ಯಾಯ ಮಠ ನಿರ್ಧರಿಸಿರುವುದಾಗಿಯೂ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಈ ಬಾರಿಯ ಉತ್ಸವದಲ್ಲಿ ಕೇಂದ್ರ ಸಚಿವರಾದ ಎಸ್.ಎಂ.ಕೃಷ್ಣ, ಎಂ.ವೀರಪ್ಪ ಮೊಯ್ಲಿ, ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್, ಗೋವಾ ಮುಖ್ಯಮಂತ್ರಿ ದಿಗಂಬರ್ ಕಾಮತ್ ಹಾಗೂ ರಾಜ್ಯದ ಸಚಿವರುಗಳೂ ಭಾಗವಹಿಸಲಿದ್ದಾರೆ.

ಶ್ರೀಕೃಷ್ಣಮಠದಲ್ಲಿ ನಡೆಯಲಿರುವ ಉತ್ಸವದಲ್ಲಿ ಹಲವಾರು ಸಂಗೀತಗಾರರು, ಕಲಾವಿದರು ತಮ್ಮ ಕಾರ್ಯಕ್ರಮದ ಪ್ರದರ್ಶನ ನೀಡಲಿದ್ದಾರೆ. ಅಲ್ಲದೇ ಹೆಸರಾಂತ ಸಂಗೀತಗಾರ ಆರ್.ಕೆ.ಪದ್ಮನಾಭನ್ ಅವರಿಗೆ ಸೆಪ್ಟೆಂಬರ್ 11ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಮಠದ ವತಿಯಿಂದ 'ಆಸ್ಥಾನ್ ವಿದ್ವಾನ್'‌ ಬಿರುದಿನೊಂದಿಗೆ ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.

ಸೆಪ್ಟೆಂಬರ್ 12ರಂದು ಶ್ರೀಕೃಷ್ಣ ಲೀಲೋತ್ಸವ ನಡೆಯಲಿದೆ. ಉತ್ಸವದ ಅಂಗವಾಗಿ ಶ್ರೀಕೃಷ್ಣನಿಗೆ ಸಂಬಂಧಿಸಿದಂತೆ ಪ್ರಬಂಧ, ರಂಗೋಲಿ, ಛದ್ಮವೇಷ ಸೇರಿದಂತೆ ಹಲವಾರು ಸ್ಪರ್ಧೆಗಳು ನಡೆಯಲಿದೆ.

ವೆಬ್ದುನಿಯಾವನ್ನು ಓದಿ