ಪೂವಿಳಿ ಪೂವಿಳಿ ಪೊನ್ನೋಣ.....

ಕೃಷ್ಣವೇಣಿ ಕುಂಜಾರು

ಪೂವಿಳಿ ಪೂವಿಳಿ ಪೊನ್ನೋಣವನ್ನು

ನೀ ವರು ನೀವರು ಪೊನ್ನೋಣ ತುಂಬಿ...

ಹೀಗೆಂದು ಕೇರಳಕ್ಕೆ ಕೇರಳವೇ ಹಾಡಿ ಕುಣಿದು ಸಂಭ್ರಮಿಸುವ ಓಣಂ ನಾಳ್‌ಗಳ್ (ದಿನಗಳು) ಕೇರಳೀಯರನ್ನು ಕೈ ಬೀಸಿ ಕರೆಯುತ್ತಿರೆ ಅಲ್ಲಿನ ಪ್ರತಿಯೊಬ್ಬನೂ ಜಾತಿ ಮತ ಭೇದವಿಲ್ಲದೆ ಎದುರುಗೊಳ್ಳಲು ಸಿದ್ಧವಾಗಿದ್ದಾನೆ.

WD
ಓಣಂ ವಿಶೇಷತೆಯೇ ಅದು. ಈ ದಿನಗಳಲ್ಲಿ ಕೇರಳ ನಾಡು ತನ್ನ ಸಾಂಪ್ರದಾಯಿಕತೆಯಲ್ಲಿ ಮುಳುಗೇಳುತ್ತದೆ. ಬಲಿ ಚಕ್ರವರ್ತಿಯ ಓಣಂ ದಿನಗಳಲ್ಲಿ ಭೂಮಿಗೆ ಬರುತ್ತಾನೆಂಬುದು ಇಲ್ಲಿನವರ ನಂಬಿಕೆ. ಅದರ ಪ್ರತೀಕವಾಗಿ ಬಲಿ ಚಕ್ರವರ್ತಿ, ವಾಮನ ವೇಷಧಾರಿಗಳು ಮನೆಮನೆಗೆ ಬಂದು "ತಿರುಮೇನೀ...." ಎಂದು ಕೂಗು ಹಾಕಿದೊಡನೆ ಮನೆಯ ಯಜಮಾನ ಆತನಿಗೆ ಫಲಾಹಾರಗಳನ್ನು ಕೊಟ್ಟು ಸತ್ಕರಿಸುತ್ತಾನೆ. ಅದಕ್ಕೆ ಪ್ರತಿಯಾಗಿ 'ಮಾವೇಲಿ' ಬಹುಮಾನವಿತ್ತು ವೇಷಧಾರಿ ಹಿಂದಿರುಗುತ್ತಾನೆ.

ಜತೆಗೆ ಮನೆ ಯಜಮಾನ ಮನೆಯವರಿಗೆಲ್ಲಾ ಉಡುಗೊರೆಗಳನ್ನಿತ್ತು ಸಂಭ್ರಮಿಸುವ ಕಾಲವಿದು.

ಇನ್ನು ಓಣಂ 'ಸದ್ಯ' ಅಂದರೆ ಓಣಂ ಹಬ್ಬದೂಟ ಅತ್ಯಂತ ಜನಪ್ರಿಯವಾದುದು. ಸಾಂಪ್ರದಾಯಿಕ ರೀತಿಯಲ್ಲಿ ಬಾಳೆಯ ಎಲೆಯ ಮೇಲೆ ಕುಚ್ಚಿಲು ಅಕ್ಕಿ ಅನ್ನ, ಕಾಳನ್, ಪುಳಿಶ್ಶೇರಿ (ಮೇಲೋಗರ), ಹಪ್ಪಳ, ತುಪ್ಪದ ಪಾಯಸ (ನೈ ಪಾಯಸಂ) ಇತ್ಯಾದಿಗಳನ್ನೊಳಗೊಂಡ ಭಕ್ಷ್ಯ ಭೋಜ್ಯಗಳು ಎಂಥವರ ಬಾಯಲ್ಲೂ ನೀರೂರಿಸುವಂತದ್ದು. ಇದಲ್ಲದೆ ಓಣಂ ಹಬ್ಬದ ಸಮಯದಲ್ಲಿ ಕೇರಳೀಯರ ಮನೆಗೆ ಭೇಟಿ ನೀಡಿದರೆ ಬೇಯಿಸಿದ ನೇಂದ್ರ ಬಾಳೆಹಣ್ಣು, ನೇಂದ್ರ ಬಾಳೆಕಾಯಿ ಚಿಪ್ಸ್ ಸವಿಯುವ ಭಾಗ್ಯ ಒದಗಬಹುದು.

'ಪೂಕಳಂ' ಅಂದರೆ ರಂಗೋಲಿ ಇಡುವ ಕಾರ್ಯಕ್ರಮ ಅತ್ಯಂತ ಜನಪ್ರಿಯವಾದುದು. ಮನೆ ಮುಂದೆ ಸುಂದರ ರಂಗೋಲಿಯಿಟ್ಟು ಮಾವೇಲಿಯನ್ನು ಸ್ವಾಗತಿಸುವುದು ಇದರ ಉದ್ದೇಶ ಎಂದೂ ನಂಬಲಾಗುತ್ತದೆ.
WD


ಇದಲ್ಲದೆ ನಾಡಿನ ಸಾಂಪ್ರದಾಯಿಕ ಕಲೆಗಳಾದ ತಿರುವಾದಿರ ನೃತ್ಯ, ವೋಟ್ಟಂ ತುಳ್ಳಲ್, ದೋಣಿಯಾಟ, ಓಣಂ ಪಾಟ್(ಓಣಂ ಹಾಡು), ಮುಂತಾದವುಗಳು ಗರಿಬಿಚ್ಚಿಕೊಳ್ಳುತ್ತವೆ ಮತ್ತು ಮುದನೀಡುತ್ತವೆ.

ಕಾಸರಗೋಡಿನಂತಹ ಗಡಿ ಪ್ರದೇಶದಿಂದ ದಕ್ಷಿಣ ಕೇರಳಕ್ಕೆ ಹೋಗುತ್ತಿದ್ದರೆ ಓಣಂ ಸಮಯದ ಮನಮೋಹಕ ಸಂದರ್ಭವನ್ನು ಸವಿಯಬಹುದು. ಹಾಗಾಗಿ ಇದು ಅಚ್ಚ ಮಲಯಾಳಿ ಹಬ್ಬವೆಂಬ ಅಭಿಪ್ರಾಯವೂ ಇದೆ. ಅದೇನೇ ಇದ್ದರೂ ಇದು ಕೇರಳೀಯರೆಲ್ಲರೂ ತಮ್ಮ ಸಾಂಪ್ರದಾಯಿಕತೆಯನ್ನು ಒರೆಗೆ ಹಚ್ಚಿಕೊಳ್ಳುವ ಹಬ್ಬ. ಈ ಹಬ್ಬದ ವಿಶೇಷತೆಗಳ ಬಗ್ಗೆ ಹೇಳುತ್ತಾ ಹೋದರೆ ಮುಗಿಯುವಂತದ್ದಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ ಜಗತ್ತಿನೆಲ್ಲೆಡೆಯಿರುವ ಕೇರಳೀಯರು ತಮ್ಮ ಜಾತಿ ಮತ ಅಂತಸ್ತು ಬದಿಗೊತ್ತಿ ಸಮಾನತೆಯಿಂದ, ಸಂಭ್ರಮದಿಂದ ಆಚರಿಸುವ ಒಂದೇ ಹಬ್ಬ ಓಣಂ.

ಎಲ್ಲರಿಗೂ ಓಣಂ ಶುಭಾಶಯಗಳು....