ಭಕ್ತಾಧಿಗಳೇ ಬನ್ನಿ...ಕೊಟ್ಟೂರ ಜಾತ್ರೆಗೆ ಹೋಗಾಣು

ಬುಧವಾರ, 15 ಫೆಬ್ರವರಿ 2012 (20:15 IST)
WD
ಕೊಟ್ಟೂರ ಸ್ವಾಮಿ. ಎಂ.ಎಸ್.

"ಕೊಟ್ಟೂರ ದೊರೆಯೇ, ನಿನಗಾರು ಸರಿಯೇ, ಸರಿಯೆಂದವರ ಹಲ್ಲು ಮುರಿಯೇ, ಬೋಪರಾಕ್" ಎನ್ನುವ ಭಕ್ತರ ಕೂಗು ಮುಗಿಲು ಮುಟ್ಟುತ್ತಿದೆ. ಫೆಬ್ರವರಿ 17 ರಂದು ಕೊಟ್ಟೂರು ಶ್ರೀ ಗುರುಬಸವೇಶ್ವರ ಸ್ವಾಮಿಯ ರಥೋತ್ಸವ ನಡೆಯಲಿದೆ. ಗಣಿಧಣಿಗಳ ನಾಡೆಂದು ಕರೆಯುವ ಬಳ್ಳಾರಿಯ ಜಿಲ್ಲೆಯ ಕೊಟ್ಟೂರು ಪ್ರಮುಖ ಧಾರ್ಮಿಕ ಕ್ಷೇತ್ರ. ಹನ್ನೆರಡನೇ ಶತಮಾನದ ಬಸವಕ್ರಾಂತಿಯ ನಂತರದಲ್ಲಿ ಅಸಮಾನತೆ, ಜಾತಿ ವರ್ಗ ವ್ಯವಸ್ಧೆಯ ವಿರುದ್ಧ ಬಂಡೆದ್ದು ತನ್ನದೇ ಪರಂಪರೆಯನ್ನು ಕಟ್ಟಿ ಬೆಳೆಸಿದ ಕೊಟ್ಟೂರು ಗುರು ಬಸವೇಶ್ವರರು ಪ್ರಮುಖ ಸಂತ ಶರಣರು.

ಜೀವನದುದ್ದಕ್ಕೂ ಮರುಳನಂತೆ (ಹುಚ್ಚನಂತೆ) ವರ್ತಿಸುತ್ತಾ ತನ್ನ ಸಾಧನೆ, ಸಮಾನತೆ, ಕಾಯಕ ಪ್ರೇಮದಿಂದಲೇ ಲೋಕದ ಜನರ ಪ್ರೀತಿಗಳಿಸಿದ ಕೊಟ್ಟೂರೇಶ್ವರ ಕೊಟ್ಟೂರು ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರವೆಂದರೆ ತಪ್ಪಾಗದು. ಮಾನವತೆಗೆ ಹೊಸ ಮೆರುಗನಿತ್ತ ಕೊಟ್ಟೂರೇಶ್ವರರು ತಮಿಳುನಾಡು ಮೂಲದ ಧರ್ಮಪುರಿ ಜಿಲ್ಲೆಯ ಹೊಸೂರಿನವರೆಂದು ಪುರಾಣದಲ್ಲಿನ ಇತಿಹಾಸ ತಿಳಿಸುತ್ತದೆ. ಅಲ್ಲಿಂದ ಪಯಣಿಸಿದ ಕೊಟ್ಟೂರೇಶ್ವರರು ಯೆಡೆಯೂರಿನ ಯತಿಗಳ ಶಿಷ್ಯತ್ವ ಪಡೆದು ನಂತರ ಚಾಮರಾಜನಗರ, ಹಂಪಿ ಮಾರ್ಗವಾಗಿ ಕೊಟ್ಟೂರಿಗೆ ಬಂದು ನೆಲೆಸಿದರೆಂದು ಹಿರಿಯರು ಹೇಳುತ್ತಾರೆ.

ಬಸವಧರ್ಮದ ಷಟ್‌ಸ್ಥಳ ಮತ್ತು ಅಷ್ಟಾವರಣಗಳನ್ನು ಸತತ ಸಾಧನೆ ಮಾಡಿದ ಗುರುಬಸವೇಶ್ವರರು ತಮ್ಮ ಪವಾಡಗಳಿಂದಾಗಿ, ಸಮಾನತಾವಾದದಿಂದಾಗಿ ಧರ್ಮಾತೀತವಾಗಿ ಜನರನ್ನು ಆಕರ್ಶಿಸುತ್ತಾ ಸಾಗಿದ ಕತೆಯನ್ನು ಎಲ್ಲರೂ ಕೇಳಬಹುದಾಗಿದೆ.

ಕೊಟ್ಟೂರೇಶನ ಭಕ್ತನಾಗಿದ್ದ ದೆಹಲಿಯ ಸುಲ್ತಾನ ಅಕ್ಬರ್ ಬಾದಶಹ ಕೊಟ್ಟೂರಿಗೆ ಭೇಟಿ ನೀಡಿದ ಸಮಯದಲ್ಲಿ ತನ್ನ ಕೊಡುಗೆಯಾಗಿ ನೀಡಿದ ಮಣಿಮಂಚ ಮತ್ತು ಖಡ್ಗವನ್ನು ಈಗಲೂ ನೋಡಬಹುದಾಗಿದೆ. ಲೀಲಾ ವಿನೋದಿಯಾಗಿದ್ದ ಕೊಟ್ಟೂರೇಶ್ವರ ತೊಟ್ಟಿಲ ಮಠ, ಮೂರ್ಕಲ್ ಮಠ, ಹಿರೇ ದರ್ಬಾರ್ ಮಠ,ಗಚ್ಚಿನ ಮಠ ಹಾಗೂ ಮರಿಕೊಟ್ಟೂರೇಶ್ವರನ ಮಠಗಳನ್ನು ತನ್ನ ಸ್ಥಾನಗಳನ್ನಾಗಿ ಮಾಡಿಕೊಂಡಿದ್ದನೆಂದು ಪೂರ್ವಿಕರು ಹೇಳುತ್ತಾರೆ.

WD
ಮೂರ್ಕಲ್ ಮಠ ಊಟದ ಮನೆಯಾಗಿತ್ತು, ತೊಟ್ಟಿಲು ಮಠ ತನ್ನ ಬಾಲ್ಯದ ಸ್ಥಳವಾಗಿತ್ತು ಅಂತೆಯೇ ಜೀವನವನ್ನು ದರ್ಬಾರ್ ಮಠದಲ್ಲಿ ಕಳೆದ ಕೊಟ್ಟೂರೇಶ್ವರರು ತಮ್ಮ ಸಾಧನೆಯ ಅಂತಿಮ ಹಂತಕ್ಕಾಗಿ ಗಚ್ಚಿನ ಮಠವನ್ನು ಆಯ್ಕೆ ಮಾಡಿಕೊಂಡರೆಂದು ಹೇಳುವರು. ಗಚ್ಚಿನ ಮಠದಲ್ಲಿ ಜೀವಂತ ಸಮಾಧಿ ಸ್ಥಿತಿಗೆ ತಲುಪಿದರೆಂದು ಇತಿಹಾಸ ತಿಳಿಸುತ್ತದೆ.

ಎಲ್ಲರೂ ಸಾಮಾನ್ಯವಾಗಿ ಭಯಬೀಳುವಂತಹ ಮೂಲಾ ನಕ್ಷತ್ರದಲ್ಲಿ ಜನಿಸಿದ ಶರಣರ ರಥೋತ್ಸವ ಸಹ ಮಧ್ಯ ಕರ್ನಾಟಕದ ಪ್ರಮುಖ ಜಾತ್ರೆಯಾಗಿದೆ. ತನ್ನ ಸಮಾನತೆಯ ಪ್ರತಿಬಿಂಬವಾಗಿ ದಲಿತರ ಕೇರಿಯ ಮುತ್ತೈದೆ ಮಹಿಳೆಯಿಂದ ಗಿಣ್ಣದ ಪ್ರಸಾದ ಮತ್ತು ಆರತಿಯೆತ್ತಿದ ನಂತರವೇ ರಥವನ್ನೆಳೆಯುವ ಕಾರ್ಯ ಆರಂಭವಾಗುವುದು ವಿಶೇಷದ್ದಾಗಿದೆ. ಅದರಲ್ಲೂ ಸರಿಸುಮಾರು ಕಳೆದ 500 ವರ್ಷಗಳಿಂದ ದಲಿತರ ಕೇರಿಯಲ್ಲಿ ಹಸು ಇಲ್ಲವೇ ಎಮ್ಮೆಯೊಂದು ಕೊಟ್ಟೂರ ತೇರಿನ ಹಿಂದಿನ ದಿನಗಳಂದು ಕರು ಹಾಕುತ್ತಿರುವುದು ನಿಜಕ್ಕೂ ಪಾವಡವಾಗಿದೆ.

ಜಾತ್ರೆ ಸಮಯದಲ್ಲಿ ರಾಜ್ಯದ ಹಲವು ಕಡೆಗಳಿಂದ ಭಕ್ತರು ತಂಡೋಪ ತಂಡವಾಗಿ ಪಾದಯಾತ್ರೆಯಲ್ಲಿ ಕೊಟ್ಟೂರಿಗೆ ಆಗಮಿಸುತ್ತಿರುವ ದೃಷ್ಯ ನಿಜಕ್ಕೂ ಸ್ಮರಣೀಯ. ಪಾದಯಾತ್ರಿಗಳ ಸಹಾಯ-ಸೇವೆಗೆಂದು ಕೊಟ್ಟೂರಿನ ನಾಗರೀಕರು ಟೊಂಕಕಟ್ಟಿ ನಿಂತಿರುವರು. ದಾರಿಯುದ್ದಕ್ಕೂ ಪಾದಯಾತ್ರಿಗಳನ್ನು ಸತ್ಕರಿಸುತ್ತಾ, ಅವರಿಗೆ ಊಟ, ಉಪಹಾರ, ವೈದ್ಯಕೀಯ ಸಹಾಯವನ್ನು ಸೇವೆಯ ರೂಪದಲ್ಲಿ ನೀಡುತ್ತಿರುವುದನ್ನು ಎಲ್ಲರೂ ಮೆಚ್ಚಬೇಕಾಗಿದೆ.

WD
ಜಾತ್ರೆಯು ಸರಿಸುಮಾರು ಎಂಟರಿಂದ ಹತ್ತು ದಿನಗಳ ತನಕ ನಡೆಯುತ್ತದೆ, ಹತ್ತಾರು ಕಡೆಗಳ ಜನರು ಜಾತ್ರೆಗೆ, ಕೊಟ್ಟೂರೇಶನ ದರ್ಶನಕ್ಕೆ ಆಗಮಿಸುತ್ತಿರುವುದು ವರ್ಷ ವರ್ಷಕ್ಕೂ ಹೆಚ್ಚಾಗುತ್ತಿದೆ. ಬಳ್ಳಾರಿ ಜಿಲ್ಲೆಯ ಪ್ರಮುಖ ವಾಣಿಜ್ಯ ಹಾಗು ಶೈಕ್ಷಣಿಕ ಕೇಂದ್ರವಾಗಿರುವ ಕೊಟ್ಟೂರು ಸರಕಾರದ ನಿರ್ಲಕ್ಷ್ಯಕ್ಕೆ ತುತ್ತಾಗಿರುವುದು ಸುಳ್ಳಲ್ಲ. ಒಂದು ನೂರು ವರ್ಷ ಇತಿಹಾಸವಿದ್ದ ಹೊಸಪೇಟೆ-ಕೊಟ್ಟೂರು ರೈಲು ಮಾರ್ಗವನ್ನು ಉನ್ನತೀಕರಿಸುವ ನೆಪದಲ್ಲಿ ಮತ್ತು ಇಲ್ಲಿನ ನಾಗರೀಕರ ಬಹುದಿನದ ಬೇಡಿಕೆಯಾಗಿದ್ದ ಹೊಸಪೇಟೆ-ಕೊಟ್ಟೂರು-ಹರಿಹರ ರೈಲು ಮಾರ್ಗ ನಿರ್ಮಾಣ ಸಂಪೂರ್ಣವಾಗಿದ್ದರೂ ಪ್ರಯಾಣಿಕರಿಗೆ ರೈಲು ಮಾತ್ರ ಮರೀಚಿಕೆಯಾಗಿದೆ.

ಬಳ್ಳಾರಿ ಜಿಲ್ಲೆಯಲ್ಲಿನ ಬಳ್ಳಾರಿ ಮತ್ತು ಹೊಸಪೇಟೆಗಳನ್ನು ಹೊರತು ಪಡಿಸಿದರೆ ಅತ್ಯುತ್ತಮ ಶಿಕ್ಷಣಕ್ಕೆಂದು ಹೆಸರಾಗಿರುವ ಕೊಟ್ಟೂರಿನಲ್ಲಿ ಹತ್ತಾರು ಶಾಲಾ ಕಾಲೇಜುಗಳು ತಲೆಯೆತ್ತಿವೆ. ಆದರೆ ಕೇವಲ ಹೋಬಳಿ ಕೇಂದ್ರವಾಗಿರುವ ಕೊಟ್ಟೂರನ್ನು ತಾಲೂಕು ಕೇಂದ್ರವಾಗಿಸುವಂತೆ ರಾಜ್ಯ ಸರಕಾರವನ್ನು ಬಹು ಹಿಂದಿನಿಂದ ಕೇಳುತ್ತಿದ್ದರೂ ರಾಜ್ಯ ಸರಕಾರ ನಿರ್ಲಕ್ಷಿಸಿದೆ. ಇನ್ನಾದರೂ ಸೌಲಭ್ಯವಂಚಿತ ಶ್ರೀಕ್ಷೇತ್ರವನ್ನು ಅಭಿವೃದ್ಧಿಪಡಿಸುವತ್ತ ರಾಜ್ಯ ಸರಕಾರ ಕ್ರಮಕೈಗೊಳ್ಳಬೇಕೆಂಬುದು ನಮ್ಮೆಲ್ಲರ ಬಯಕೆ...

ವೆಬ್ದುನಿಯಾವನ್ನು ಓದಿ