ಭೂಮಿಯ ಸಮೃದ್ಧಿಯ ಸಂಕೇತ ಸಂಕ್ರಾಂತಿ

ರಾಜೇಶ್ ಪಾಟೀಲ್
WD

ಸಂಕ್ರಾಂತಿ ಹಬ್ಬವನ್ನು ಕೃಷಿ ಪ್ರಧಾನ ಹಬ್ಬವಾಗಿ ದಕ್ಷಿಣ ಭಾರತದಲ್ಲಿ ವಿಶೇಷವಾಗಿ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ. ರೈತರು ತಾವು ಬೆಳೆದ ಪೈರುಗಳನ್ನು ತೆಗೆಯುವ ಸಂದರ್ಭದಲ್ಲಿ ಸಂತಸ ಸಂಭ್ರಮಗಳ ಮಧ್ಯೆ ಆಚರಿಸುವ ಹಬ್ಬ ಸಮೃದ್ಧಿಯ ಸಂಕೇತ. ಒಂದು ಕಡೆ ಶ್ರಮವಹಿಸಿದ ಬೆಳೆದ ಪೈರು ಉತ್ತಮವಾಗಿ ಫಸಲು ನೀಡಿದ ಸಂತಸ. ಮತ್ತೊಂದೆಡೆ ಬಂಧು ಬಾಂಧವರು ಸೇರಿ ಸಂಭ್ರಮದಿಂದ ಆಚರಿಸುವ ಹಬ್ಬದ ಸಡಗರ.

ರಾಜ್ಯದಲ್ಲಿ ಸಂಕ್ರಾಂತಿಗೆ ಸಂಬಂಧಪಟ್ಟ ಆಚರಣೆಗಳಲ್ಲಿ ಮುಖ್ಯವಾಗಿ ಕಂಡುಬರುವುದು "ಎಳ್ಳು". ಮನೆಯಲ್ಲಿ ಎಳ್ಳನ್ನು ತಯಾರಿಸಿ ಸುತ್ತಲಿನ ಮನೆಗಳಿಗೆ "ಎಳ್ಳು ನೀಡುವುದು ಮತ್ತು ಸ್ನೇಹಿತರು- ಸಂಬಂಧಿಕರೊಂದಿಗೆ ಶುಭಾಶಯಗಳನ್ನು ಹಂಚಿಕೊಳ್ಳುವುದು ಸಾಮಾನ್ಯವಾಗಿ ಕಂಡುಬರುವ ಸಂಕ್ರಾಂತಿಯ ಸಂಪ್ರದಾಯಗಳು. ಎಳ್ಳಿನ ಜೊತೆಗೆ ಸಕ್ಕರೆ ಅಚ್ಚುಗಳು, ಹಣ್ಣು, ಮತ್ತು ಕಬ್ಬಿನ ತುಂಡುಗಳನ್ನು ಸಹ ನೀಡುವುದುಂಟು. ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಬೆಲ್ಲ, ಒಣ ಕೊಬ್ಬರಿ, ಹುರಿಗಡಲೆ, ಸಿಪ್ಪೆ ತೆಗೆದ ಕಡಲೆಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ "ಎಳ್ಳು" ತಯಾರಿಸಲಾಗುತ್ತದೆ.

ಸಂಕ್ರಾಂತಿ ಹಬ್ಬ ನಗರಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿಯೇ ಹೆಚ್ಚಿನ ಸಡಗರದಿಂದ ಆಚರಿಸುತ್ತಾರೆ. ರೈತರಿಗೆ ತಮ್ಮ ಅನ್ನ ನೀಡುವ ಭೂಮಿಯನ್ನು ಪೂಜಿಸುವ ತವಕ. ಮಹಿಳೆಯರು ಪುರುಷರು ಎನ್ನುವ ಭೇದಭಾವವಿಲ್ಲದೇ ತಾವು ಮಾಡಿದ ಅಡುಗೆಯನ್ನು ಎತ್ತಿನ ಬಂಡಿಯಲ್ಲಿ ಇಟ್ಟು ಕುಟುಂಬ ಸಮೇತ ಹೊರಟ ರೈತರ ಮುಖಗಳಲ್ಲಿ ಒಂಥರಾ ನೆಮ್ಮದಿ ಸಂತೃಪ್ತಿ ಸಂತೋಷ, ಉಲ್ಲಾಸ.

ಎತ್ತಿನ ಬಂಡಿ ಹೊಲವನ್ನು ಪ್ರವೇಶಿಸಿದ ಕೂಡಲೇ ಹೊಲದಲ್ಲಿ ಕಬ್ಬಿನಿಂದ ತ್ರಿಕೋನಾಕಾರದಲ್ಲಿ ರಚಿಸಲಾದ ಗೋಪುರದಲ್ಲಿ ತಮ್ಮ ಆರಾಧ್ಯದೈವದ ಮೂರ್ತಿಗೆ ಪ್ರಸಾದ ಸಿಂಪಡಿಸಿದ ನಂತರ ರೈತರು ಹೊಲದ ನಾಲ್ಕು ದಿಕ್ಕುಗಳಿಗೂ ಪ್ರಸಾದವನ್ನು ತೋರುತ್ತಾ ಉಧೋ..ಉಧೋ.. ಎನ್ನುತ್ತಾ ತಮಗೆ ಅನ್ನ ನೀಡಿದ ಭೂಮಿತಾಯಿಗೆ ಮೊದಲ ಪ್ರಸಾದವನ್ನು ಅರ್ಪಿಸುತ್ತಾರೆ. ಕುಟುಂಬದ ಮಹಿಳೆಯರು ಹೊಲಗಳಲ್ಲಿ ದುಡಿದ ಆಳುಮಕ್ಕಳಿಗೆ ಮೊದಲು ಊಟ ನೀಡಿ ಅವರು ತೃಪ್ತಿಯಾದ ನಂತರವೇ ಹೊಲದ ಮಾಲೀಕರಿಗೆ ಊಟ ನೀಡುತ್ತಾರೆ. ಸುತ್ತಲಿನ ಹೊಲಗಳ ನೆರೆಹೊರೆಯ ರೈತರು ಪರಸ್ಪರ ಆತ್ಮೀಯತೆಯಿಂದ ಆಲಂಗಿಸಿ ಮಕರ ಸಂಕ್ರಮಣ ಸುಖಶಾಂತಿ ನೆಮ್ಮದಿ ತರಲಿ ಎಂದು ಶುಭಕೋರುತ್ತಾರೆ.

ಮಧ್ಯಾಹ್ನದ ಇಳಿಹೊತ್ತಿಗೆ ಗ್ರಾಮಗಳಿಗೆ ಮರಳಿ ನಂತರ ಹೊಸ, ಹೊಸ ಬಣ್ಣದ ಉಡುಗೆಗಳನ್ನು ಧರಿಸಿ ಕೈಯಲ್ಲೊಂದು ಕುಸರಿಕಾಳು, ಎಳ್ಳು ಬೆಲ್ಲ, ಕಬ್ಬಿನ ತುಂಡು, ಹುರಿಗಡಲೆ, ಹುರಿದ ಎಳ್ಳು ಸಕ್ಕರೆಯ ಬಟ್ಟಲನ್ನು ಹಿಡಿದುಕೊಂಡು ಆತ್ಮೀಯರ ಮನೆಗೆ ತೆರಳಿ ಎಳ್ಳು ಬೆಲ್ಲ ತಗೊಂಡು ಶುಭನುಡಿಗಳನ್ನಾಡುತ್ತಾರೆ.

ಹೊಲದ ಕೆಲಸಗಳಿಂದ ವಿರಾಮ ಪಡೆಯುವ ರೈತರು ಸಂಕ್ರಮಣದ ನಿಮಿತ್ತ ಅನೇಕ ಕಾರ್ಯಕ್ರಮಗಳನ್ನು ಗ್ರಾಮಗಳಲ್ಲಿ ಹಮ್ಮಿಕೊಂಡು ಸಂತಸದಿಂದ ಭಾಗವಹಿಸುತ್ತಾರೆ.

ಪರಸ್ಪರರು ಆತ್ಮೀಯತೆಯಿಂದ ಆಲಂಗಿಸುವುದನ್ನು ನೋಡಿದಲ್ಲಿ ಶತ್ರುತ್ವವನ್ನು ಮರೆಸಿ ಮಿತ್ರತ್ವಕ್ಕೆ ನಾಂದಿ ಹಾಡುವ ಹಬ್ಬವಾಗಿದೆ ಎನ್ನಿಸದೇ ಇರದು.