ಯುವಕರಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿಕೆ ಅಗತ್ಯ:ಪ್ರಧಾನಿ

ಸೋಮವಾರ, 22 ನವೆಂಬರ್ 2010 (17:58 IST)
PTI
ಯುವಕರು ಮೌಲ್ಯಾಧಾರಿತ ಶಿಕ್ಷಣದಿಂದ ಮಾತ್ರ ಯಶಸ್ವಿನತ್ತ ಪಯಣ ಬೆಳೆಸಲು ಸಾಧ್ಯ.ಸತ್ಯ ಸಾಯಿ ಸಂಸ್ಥೆ, ಶಿಕ್ಷಣದ ಜೊತೆಗೆ ಚಾರಿತ್ರ್ಯಶುದ್ದಿಯನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತಿರುವುದು ಸಂತಸದ ಸಂಗತಿ. ಇತರ ಶಿಕ್ಷಣ ಸಂಸ್ಥೆಗಳು ಮೌಲ್ಯಾಧಾರಿತ ಶಿಕ್ಷಣವನ್ನು ನೀಡಬೇಕು ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಕರೆ ನೀಡಿದ್ದಾರೆ.

ಶ್ರೀ ಸತ್ಯ ಸಾಯಿ ಬಾಬಾ ಅವರ 85ನೇ ಹುಟ್ಟುಹಬ್ಬದ ಅಂಗವಾಗಿ ಸಂಸ್ಥೆ ಆಯೋಜಿಸಿದ ಘಟಿಕೋತ್ಸವ ಸಮಾರಂಭದಲ್ಲಿ ಪ್ರಧಾನಿ ಡಾ.ಸಿಂಗ್ ಮಾತನಾಡುತ್ತಿದ್ದರು.

ಆಂದ್ರಪ್ರದೇಶದ ಜಿಲ್ಲೆಗಳಲ್ಲಿರುವ ಬರಗಾಲ ಪೀಡಿತ ಸುಮಾರು 731 ಗ್ರಾಮಗಳಲ್ಲಿ ಬಡವರಿಗೆ ನೆರವಾಗಲು ಹಮ್ಮಿಕೊಂಡ ಕಾರ್ಯಕ್ರಮಗಳಿಂದ ತುಂಬಾ ಪ್ರಭಾವಿತನಾಗಿದ್ದೇನೆ. ಗೋದಾವರಿ ಜಿಲ್ಲೆಗಳಲ್ಲಿ ನೀರು ಸರಬರಾಜು ವ್ಯವಸ್ಥೆ, ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ, ಬಡ ರೋಗಿಗಳಿಗಾಗಿ ತುರ್ತುವಾಹನ ವ್ಯವಸ್ಥೆಗಳನ್ನು ಉಚಿತವಾಗಿ ನೀಡುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದರು.

ಕಳೆದ 1981ರ ನವೆಂಬರ್ 22 ರಂದು ಆರಂಭವಾದ ಶ್ರೀ ಸತ್ಯ ಸಾಯಿ ಇನ್ಸ್‌ಟಿಟ್ಯೂಟ್ ಆಫ್ ಹೈಯರ್ ಲರ್ನಿಂಗ್ ಪ್ರಶಾಂತಿ ನಿಲಯಂ ಡೀಮ್ಡ್ ಯುನಿವರ್ಸಿಟಿಯಾಗಿದ್ದು, ಯುನಿವರ್ಸಿಟಿ ಗ್ರ್ಯಾಂಟ್ಸ್ ಕಮಿಶನ್‌(ಯುಜಿಸಿ) ಇಲಾಖೆಯಡಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ.

ಡೀಮ್ಡ್ ಯುನಿವರ್ಸಿಟಿಯಡಿ ಅನಂತ್‌ಪುರ್‌ ಜಿಲ್ಲೆಯಲ್ಲಿ ಮೂರು ಕಾಲೇಜ್‌ಗಳು, ವೈಟ್‌ಫಿಲ್ಟ್ (ಕರ್ನಾಟಕ) ಮತ್ತು ಪ್ರಶಾಂತಿ ನಿಲಯಂ(ಆಂಧ್ರಪ್ರದೇಶ)ನಲ್ಲಿ ತಲಾ ಒಂದೊಂದು ಕಾಲೇಜ್‌ಗಳ ಉಸ್ತುವಾರಿಯನ್ನು ವಹಿಸಿಕೊಂಡಿವೆ.ಪ್ರಶಾಂತಿ ನಿಲಯಂ ಕಾಲೇಜಿನಲ್ಲಿ ಪುರಾತನ 'ಗುರುಕುಲ' ಶಿಕ್ಷಣವಾದ ಸತ್ಯ, ಶಾಂತಿ, ಕರ್ತವ್ಯ, ಧರ್ಮ, ಶಿಸ್ತು, ಏಕತೆ, ಗೌರವ, ದಯಾಪರತೆ ಮತ್ತು ಅಹಿಂಸೆಯ ಶಿಕ್ಷಣವನ್ನು ನೀಡುತ್ತಿದೆ.

ಸತ್ಯ ಸಾಯಿಬಾಬಾ ನಾಳೆ ತಮ್ಮ 85ನೇ ಹುಟ್ಟುಹಬ್ಬದ ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳಲಿರುವುದರಿಂದ, ಪುಟ್ಟಪರ್ತಿಯಾದ್ಯಂತ ತಳಿರು ತೋರಣಗಳಿಂದ ಶೃಂಗರಿಸಲಾಗಿದೆ. ವಿಶ್ವದಲ್ಲಿರುವ ಎಲ್ಲಾ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಘಟಿಕೋತ್ವವ ಸಮಾರಂಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,ಆಂಧ್ರಪ್ರದೇಶ ಮುಖ್ಯಮಂತ್ರಿ ಕೆ.ರೋಸಯ್ಯ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ವೆಬ್ದುನಿಯಾವನ್ನು ಓದಿ