ಪುಟ್ಟಪರ್ತಿ: ಶ್ರೀ ಸತ್ಯಸಾಯಿಬಾಬಾ ಅವರ 85ನೇ ಹುಟ್ಟು ಹಬ್ಬ ಪ್ರಯುಕ್ತ ನವೆಂಬರ್ 15ರಿಂದ ಆರಂಭವಾಗಿರುವ ಕಾರ್ಯಕ್ರಮಗಳಲ್ಲಿ ಶುಕ್ರವಾರ ಪಾಲ್ಗೊಂಡ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಸಮಾಜದಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಸತ್ಯಸಾಯಿ ಬಾಬಾ ಅವರ ದೃಷ್ಟಿಕೋನವು ಪ್ರಗತಿಪರವಾಗಿದೆ ಎಂದು ಶ್ಲಾಘಿಸಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮದಿನವಾದ ಶುಕ್ರವಾರ ಈಶ್ವರಮ್ಮ ಮಹಿಳಾ ಸಂಕ್ಷೇಮ ಟ್ರಸ್ಟ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಸಮಾವೇಶದಲ್ಲಿ ಅವರು ಭಾಗವಹಿಸಿ, ಮಹಿಳಾ ಸಬಲೀಕರಣಕ್ಕೆ ಶ್ರೀ ಸತ್ಯ ಸಾಯಿ ಬಾಬಾ ಮತ್ತು ಅವರ ಸಂಘಟನೆ ಮಾಡುತ್ತಿರುವ ಶ್ರಮವನ್ನು ಶ್ಲಾಘಿಸಿದರು. ಆಂಧ್ರ ಪ್ರದೇಶದ ಮಾಹಿತಿ ಸಚಿವೆ ಜೆ.ಗೀತಾ ರೆಡ್ಡಿ ಕೂಡ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಇದಕ್ಕೆ ಮೊದಲು ಬುಧವಾರ, ಸತ್ಯ ಸಾಯಿ ಬಾಬಾ ಆಶ್ರಮದಲ್ಲಿ 85 ಜೋಡಿಗಳು ಸಾಮೂಹಿಕ ವಿವಾಹದಲ್ಲಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು. ನವೆಂಬರ್ 23ರಂದು ಶ್ರೀ ಸತ್ಯ ಸಾಯಿ ಬಾಬಾ ಅವರ 85ನೇ ಜನ್ಮದಿನದ ಅಂಗವಾಗಿ ಶ್ರೀ ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್ 85 ಜೋಡಿಗಳಿಗೆ ವಿವಾಹ ಏರ್ಪಡಿಸಿತ್ತು.
ಈ ಸಂದರ್ಭ ಮಾತನಾಡಿದ ಉದ್ಯಮಿ ರತನ್ ಟಾಟಾ, ಸಾಯಿ ವಿಶ್ವವಿದ್ಯಾಲಯ ಮತ್ತು ಉನ್ನತ ವೈದ್ಯಕೀಯ ವಿಜ್ಞಾನ ಸಂಸ್ಥೆ ಮುಂತಾದ ಸಾಯಿ ಟ್ರಸ್ಟ್‌ನ ಸೌಲಭ್ಯಗಳು ಅತ್ಯದ್ಭುತ. ಸಿಬ್ಬಂದಿಯ ವೃತ್ತಿಪರತೆ ಮತ್ತು ಗುಣಮಟ್ಟವು ನನ್ನನ್ನು ಆಕರ್ಷಿಸಿದೆ ಎಂದರು.
ಸಾಯಂಕಾಲ ಪ್ರಖ್ಯಾತ ಕೊಳಲು ವಾದಕ ಪಂಡಿತ್ ರೋನು ಮುಜುಂದಾರ್ ಅವರಿಂದ ಕೊಳಲು ವಾದನ, ಬಳಿಕ ಸಿಕ್ಕಿಲ್ ಗುರುಚರಣ್ ಅವರಿಂದ ಕರ್ನಾಟಕ ಸಂಗೀತ ಕಚೇರಿ ನಡೆಯಿತು.