ಶ್ರೀ ,ಸತ್ಯ ಸಾಯಿಬಾಬಾ 85ನೇ ಜನ್ಮದಿನಾಚರಣೆ ಅಂಗವಾಗಿ ನವೆಂಬರ್ 15ರಿಂದ ನವೆಂಬರ್ 23ರವರೆಗೆ ನಡೆದ 'ಫೆಸ್ಟಿವಲ್ ಆಫ್ ಡಿವೈನ್ ಲವ್' ಕಾರ್ಯಕ್ರಮಗಳಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡು ಬಾಬಾ ಆಶೀರ್ವಾದ ಪಡೆದರು ಎಂದು ಮೂಲಗಳು ತಿಳಿಸಿವೆ.
ಬಾಬಾ ಜನ್ಮದಿನಾಚರಣೆ ಅಂಗವಾಗಿ ಪುಟ್ಟಪರ್ತಿ ಪಟ್ಟಣದಾದ್ಯಂತ ತಳಿರು ತೋರಣಗಳಿಂದ ಸಿಂಗರಿಸಿ ಸಂಭ್ರಮಾಚರಣೆಯಲ್ಲಿ ಭಕ್ತಾದಿಗಳು ತೊಡಗಿದ್ದರು.ಕಳೆದ ಒಂದು ವಾರದ ಅವಧಿಯಲ್ಲಿ ಸಾವಿರಾರು ಸಂಖ್ಯೆಯ ದೇಶ ವಿದೇಶಗಳ ಭಕ್ತರು ಪುಟ್ಟಪರ್ತಿಗೆ ಆಗಮಿಸಿದ್ದರು. ದೇಶದ 16 ರಾಜ್ಯಗಳಲ್ಲಿ ದೂರದರ್ಶನ ನೇರ ಪ್ರಸಾರ ಮಾಡಿತ್ತು.ವಿಶ್ವದಾದ್ಯಂತ 62 ರಾಷ್ಟ್ರಗಳಲ್ಲಿ ಪ್ರಸಾರ ಕಾರ್ಯಕ್ರಮವನ್ನು ಬಿತ್ತರಿಸಲಾಗಿದೆ.
ಖ್ಯಾತ ಸಂಗೀತಕಾರರಾದ ಹರಿಹರನ್, ಶಂಕರ್ ಮಹಾದೇವನ್ ಮತ್ತು ಸುರೇಶ್ ವಾಡೇಕರ್ ತಮ್ಮ ಸಂಗೀತ ಪ್ರತಿಭೆಯನ್ನು ಪರಿಚಯಿಸಿದರು ಎಂದು ಆಶ್ರಮದ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕೇಂದ್ರದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಸ್.ಕೃಷ್ಣ, ಕೇಂದ್ರದ ಉಕ್ಕು ಖಾತೆ ಸಚಿವ ವೀರಭದ್ರಸಿಂಗ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶಮುಖ್,ವಿದ್ಯುತ್ ಖಾತೆ ಸಚಿವ ಸುಶೀಲ್ ಕುಮಾರ್ ಶಿಂಧೆ, ಆಂಧ್ರಪ್ರದೇಶ ರಾಜ್ಯಪಾಲ ನರಸಿಂಹನ್, ಪಂಜಾಬ್ ರಾಜ್ಯಪಾಲ ಶಿವರಾಜ್ ಪಾಟೀಲ್,ತಮಿಳುನಾಡು ಉಪಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ್, ರತನ್ ಟಾಟಾ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಸತ್ಯ ಸಾಯಿಬಾಬಾ ಅವರ 85ನೇ ಜನ್ಮದಿನಾಚರಣೆ ಅಂಗವಾಗಿ, ಅಖಿಲ ಭಾರತ ಸತ್ಯ ಸಾಯಿ ಸಂಸ್ಥೆಯ ಅಧ್ಯಕ್ಷರಾದ ವಿ.ಶ್ರೀನಿವಾಸನ್ ಕೆಲ ಯೋಜನೆಗಳನ್ನು ಘೋಷಿಸಿದರು. ಪುಟ್ಟಪರ್ತಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಸಂಚಾರಿ ಆಸ್ಪತ್ರೆಯ ಸೇವೆಯನ್ನು ಪಡೆಯುತ್ತಿರುವ ಗ್ರಾಮಸ್ಥರಿಗೆ ಉಚಿತವಾಗಿ ಪ್ರತಿನಿತ್ಯ ಪೋಷ್ಟಿಕಾಂಶ ಆಹಾರ ನೀಡುವ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಶ್ರೀ ಸತ್ಯ ಸಾಯಿ ಇನ್ಸ್‌ಟಿಟ್ಯೂಟ್ ಆಫ್ ಹೈಯರ್ ಲರ್ನಿಂಗ್ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳಾದ ಎಸ್.ವಿ.ಗಿರಿ ಮಾತನಾಡಿ, ಶ್ರೀ ಸತ್ಯ ಸಾಯಿ ವಿದ್ಯಾ ವಾಹಿನಿ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಯಲ್ಲಿ ನಡತೆಯನ್ನು ಕಲಿಸಿಕೊಡಲಾಗುತ್ತದೆ. ತಂತ್ರಜ್ಞಾನವನ್ನು ಬಳಸಿಕೊಂಡು ಗುಣಮಟ್ಟದ ಶಿಕ್ಷಣ ನೀಡುವುದು ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯವಾಗಿದೆ ಎಂದರು.
ವಿದ್ಯಾವಾಹಿನಿ ಯೋಜನೆಯನ್ನು ರತನ್ ಟಾಟಾ, ಎಸ್.ವಿ.ಗಿರಿ ಮತ್ತು ಟಿಸಿಎಸ್ ಮುಖ್ಯಸ್ಥ ಎನ್.ಚಂದ್ರಶೇಖರ್ ವಿದ್ಯಾವಾಹಿನಿ ಯೋಜನೆಯನ್ನು ಜಾರಿಗೊಳಿಸಿದರು.