ಅಮಿತಾಬ್ ಬಗ್ಗೆ ತುಂಬಾ ಕೇಳಿದ್ದೇನೆ: ಎಮಿ ಆಡಮ್ಸ್

ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಮೂರನೇ ಬಾರಿ ನಾಮ ನಿರ್ದೇಶನ ಪಡೆದಿರುವ ಕೆಂಚು ಕೂದಲಿನ ಹಾಲಿವುಡ್ ಸುಂದರಿ ಎಮಿ ಆಡಮ್ಸ್ ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ ಬಗ್ಗೆ ತುಂಬಾ ಕೇಳಿದ್ದೇನೆ ಎಂದು ಹೇಳಿಕೊಂಡಿದ್ದು, ಭವಿಷ್ಯದಲ್ಲಿ ಭಾರತಕ್ಕೆ ಭೇಟಿ ನೀಡುವ ಇರಾದೆ ವ್ಯಕ್ತಪಡಿಸಿದ್ದಾರೆ.

'ದಿ ಫೈಟರ್' ಚಿತ್ರ ಆಸ್ಕರ್‌ನ ಏಳು ಪ್ರಶಸ್ತಿ ವಿಭಾಗದಲ್ಲಿ ನಾಮ ನಿರ್ದೇಶನ ಪಡೆದಿದೆ. ಹಾಗೆಯೇ ನಟಿ ಎಮಿ ಆಡಮ್ಸ್ 'ಅತ್ಯುತ್ತಮ ಸಹಾಯಕ ನಟಿ' ಪ್ರಶಸ್ತಿಗಾಗಿ ಸ್ಪರ್ಧಾ ಕಣದಲ್ಲಿದ್ದಾರೆ. ಇದರಂತೆ ನಡೆಸಿದ ಸಂದರ್ಶನವೊಂದರಲ್ಲಿ ಭಾರತಕ್ಕೆ ಭೇಟಿ ನೀಡುವ ಬಯಕೆಯನ್ನು ಆಕೆ ವ್ಯಕ್ತಪಡಿಸಿದ್ದಾರೆ.

ಎಮಿ ಆಡಮ್ಸ್ ಜತೆ ನಡೆಸಿದ ಸಂದರ್ಶನದ ತುಣುಕುಗಳು ಇಲ್ಲಿವೆ...

'ದಿ ಫೈಟರ್'ನಲ್ಲಿ ನಟಿಸಲು ಸ್ಪೂರ್ತಿ ಏನು?
- ಅಸಾಮಾನ್ಯ ಬಾಕ್ಸರ್ ಮಿಕಿ ವಾರ್ಡ್‌ನ ನೈಜ ಕಥೆ. ಜೀವನದಲ್ಲಿ ಎದುರಾದ ಸಂಕಷ್ಟಗಳನ್ನು ಎದುರಿಸಿ ಆತ ಮುಂಚೂಣಿಗೆ ಬಂದ ಯಶೋಗಾತೆ ನನ್ನನ್ನು ಆ ಚಿತ್ರದಲ್ಲಿ ನಟಿಸಲು ಪ್ರೇರೇಪಿಸಿತು.

ಆಸ್ಕರ್‌ನಲ್ಲಿ 'ಅತ್ಯುತ್ತಮ ಸಹಾಯಕ ನಟಿ' ಪ್ರಶಸ್ತಿಗಾಗಿ ನಾಮನಿರ್ದೇಶನ ಪಡೆದಿದ್ದೀರಾ, ನಿಮ್ಮ ಪ್ರಭಲ ಪ್ರತಿಸ್ಪರ್ದಿ ಯಾರು?
-ನಾಮನಿರ್ದೇಶನ ಪಡೆದ ನಟಿಯರೆಲ್ಲರೂ ಅತ್ಯುತ್ತಮ ಪ್ರತಿಭೆಯನ್ನೇ ಹೊಂದಿದ್ದಾರೆ. ಉತ್ತಮ ನಟನೆಯಿಂದಾಗಿಯೇ ಅವರು ನಾಮ ನಿರ್ದೇಶನ ಪಡೆದಿದ್ದಾರೆ. ಆದರೆ ಪ್ರಬಲ ಪೈಪೋಟಿ ಇದ್ದರೂ ಪ್ರಶಸ್ತಿ ಗೆಲ್ಲುವ ಬಯಕೆ ನನ್ನದಾಗಿದೆ ಎಂದರು.

ಪ್ರಶಸ್ತಿ ಸ್ವೀಕಾರ ಭಾಷಣ ಸಿದ್ಧವಾಗಿದೆಯೇ?
- ಹಲವು ಬಾರಿ ಆಸ್ಕರ್ ಪ್ರಶಸ್ತಿಯ ಸನಿಹಕ್ಕೆ ಬಂದಾಗಿನಿಂದ ಇಂತಹದೊಂದು ಭಾಷಣವನ್ನು ಸಿದ್ಧಪಡಿಸುವ ಅಗತ್ಯವಿಲ್ಲ. ಆದರೆ ಪ್ರಶಸ್ತಿ ಗೆಲುವು ವಿಶೇಷ ಅನುಭವ ಆಗಿರಲಿದೆ. ಯಾವ ಪದಗಳಿಗೂ ನನ್ನ ಭಾವೋದ್ವೇಗವನ್ನು ವಿವರಿಸಲಾಗದು ಎಂದರು.

ಭಾರತಕ್ಕೆ ಭೇಟಿ ನೀಡುತ್ತೀರಾ...?
-ಸದ್ಯಕ್ಕಿಲ್ಲ. ಆದರೆ ಖಂಡಿತವಾಗಿಯೂ ಬರುವ ಇಚ್ಛೆಯಿದೆ. ಅಲ್ಲಿನ ಜನತೆ ಹಾಗೂ ಬಾಲಿವುಡ್‌ನ ಬಗ್ಗೆ ತುಂಬಾ ಕೇಳಿದ್ದೇನೆ. ಭಾರತದ ಜನರ ಜತೆ ಮಾತನಾಡುವ ಬಯಕೆಯಿದೆ ಎಂದರು.

ಭಾರತೀಯ ಚಲನಚಿತ್ರಗಳನ್ನು ನೋಡಿದ್ದೀರಾ?
ಅಮಿತಾಬ್ ಬಚ್ಚನ್ ಬಗ್ಗೆ ತುಂಬಾ ಕೇಳಿದ್ದೇನೆ ಎಂದು ಚುಟುಕಾಗಿ ಉತ್ತರಿಸಿದರು.

'ದಿ ಫೈಟರ್' ಬಾಕ್ಸಿಂಗ್ ಕಥೆಯನ್ನಾದರಿಸಿದ್ದು. ಅದನ್ನು ಹೊರತು ಯಾವ ಕ್ರೀಡೆಯ ಮೇಲೆ ಹೆಚ್ಚು ಆಸಕ್ತಿ ಹೊಂದಿದ್ದೀರಾ? ವಿಶ್ವಕಪ್ ಕ್ರಿಕೆಟನ್ನೇನಾದರೂ ಅನುಸರಿಸುತ್ತಿದ್ದೀರಾ..?
-ಇಲ್ಲ ಕ್ರಿಕೆಟನ್ನು ಫಾಲೋ ಮಾಡುತ್ತಿಲ್ಲ. ಆದರೆ ಫುಟ್‌ಬಾಲ್ ನೋಡುತ್ತಿರುತ್ತೇನೆ ಎಂದು ಮುಕ್ತಾಯಗೊಳಿಸಿದರು.

ವೆಬ್ದುನಿಯಾವನ್ನು ಓದಿ