ವಿಶ್ವಕಪ್ ಫುಟ್ಬಾಲ್ ಕೂಟದ 'ವಕಾ ವಕಾ' ಹಾಡಿನಿಂದ ಜನರನ್ನು ಹುಚ್ಚೆಬ್ಬಿಸಿದ್ದ ಪಾಪ್ ಗಾಯಕಿ ಶಕೀರಾ ಹಾರ್ವರ್ಡ್ ವಿಶ್ವ ವಿದ್ಯಾಲಯದ ವರ್ಷದ ಗಾಯಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿರುವ ಸಂಗೀತಗಾರರು, ನಟರು ಹಾಗೂ ಬರಹಗಾರರಿಗೆ ಕೊಡಮಾಡುವ ಪ್ರಶಸ್ತಿ ಇದಾಗಿದೆ.
ಶಕೀರಾ ತನ್ನ 'ಬೇರ್ ಫೂಟ್' ಸಂಸ್ಥೆಯ ಮೂಲಕ ಕೊಲಂಬಿಯಾದ ನಿರ್ಗತಿಕ ಬಡ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ಮತ್ತು ಪೌಷ್ಟಿಕ ಆಹಾರ ಸೇವೆ ಒದಗಿಸುತ್ತಿದ್ದಾರೆ. ಹಾಗೂ ಇಲ್ಲಿನ ಯುನಿಸೆಫ್ನ ರಾಯಭಾರಿಯೂ ಆಗಿದ್ದಾರೆ.
ಹಾರ್ವರ್ಡ್ ವಿಶ್ವ ವಿದ್ಯಾಲಯದಲ್ಲಿ ನಡೆದ ಸಾಂಸ್ಕೃತಿಕ ಉತ್ಸವದಲ್ಲಿ ಹಾರ್ವರ್ಡ್ ಫೌಂಡೇಶನ್ನ 2011ರ ವರ್ಷದ ಗಾಯಕಿ ಪ್ರಶಸ್ತಿಯನ್ನು ಸ್ವೀಕರಿಸಿದ ಶಕೀರಾ, ತನ್ನ ಕಾರ್ಯಸೇವೆಯನ್ನು ಗುರುತಿಸಿ ಗೌರವಿಸಿದುದಕ್ಕೆ ವಂದಿಸಿದರು. ಇದೇ ವೇಳೆ ವಿಶ್ವ ವಿದ್ಯಾಲಯದ ಸಾಂಸ್ಕೃತಿಕ ಸಮಾರಂಭದಲ್ಲಿ ನೆರೆದಿದ್ದ ವಿದ್ಯಾರ್ಥಿಗಳಿಗೆ ಬಡ ರಾಷ್ಟ್ರಗಳ ಶಿಕ್ಷಣ ಬೆಳವಣಿಗೆಗೆ ಸ್ವಯಂ ಪ್ರೇರಿತರಾಗಿ ಯತ್ನಿಸಲು ಕರೆಕೊಟ್ಟರು.
ಐವತ್ತು ದಶಲಕ್ಷ ಆಲ್ಬಂಗಳ ಮಾರಾಟ ದಾಖಲೆ ಕಂಡಿರುವ ಗಾಯಕಿ ಶಕೀರಾ ತನ್ನ ಸಾಧನೆಯನ್ನು ಇನ್ನೂ ಮುಂದುವರಿಸಿದ್ದಾರೆ. ಇವರ ಬಹು ನಿರೀಕ್ಷೆಯ ಆಲ್ಬಂ 'ಸೇಲ್ ಎಲ್ ಸೋಲ್ (ದಿ ಸನ್ ಕಮ್ಸ್ ಔಟ್)', ವಿಶ್ವಕಪ್ ಫುಟ್ಬಾಲ್ ಪಂದ್ಯಕ್ಕಾಗಿ ಅವರು ಹಾಡಿದ ಜನಪ್ರಿಯ 'ವಕಾ ವಕಾ' ಗೀತೆಯನ್ನು ಒಳಗೊಂಡಿದೆ.
ನಟಿಯರಾದ ಸಲ್ಮಾ ಹಯೇಕ್, ಶರೊನ್ ಸ್ಟೋನ್ ಹಾಗೂ ನಟರಾದ ವಿಲ್ ಸ್ಮಿತ್ ಮತ್ತು ಜಾಕಿ ಚಾನ್ ಸೇರಿದಂತೆ ಜಾಝ್ ಸಂಗೀತಗಾರ ಹೆರ್ಬಿ ಹಾನ್ಕಾಕ್ ಮುಂತಾದವರು ಈ ಮೊದಲೇ ಹಾರ್ವರ್ಡ್ನ ವಾರ್ಷಿಕ ಕಲಾ ಪ್ರಶಸ್ತಿಗೆ ಭಾಜನರಾಗಿದ್ದಾರೆ.