ಡಬ್ಲಿನ್ : 66 ವರ್ಷದ ಮಹಿಳೆಯ ಹೊಟ್ಟೆ ಹಾಗೂ ಕರುಳಿನಿಂದ ಬರೋಬ್ಬರಿ 55 ಬ್ಯಾಟರಿಗಳನ್ನು ವೈದ್ಯರು ಹೊರ ತೆಗೆದಿರುವ ವಿಚಿತ್ರ ಘಟನೆ ಐರ್ಲೆಂಡಿನಲ್ಲಿ ನಡೆದಿದೆ.
ಮಹಿಳೆ ಉದ್ದೇಶಪೂರ್ವಕವಾಗಿಯೇ ತನ್ನನ್ನು ತಾನು ಘಾಸಿಗೊಳಿಸುವ ಉದ್ದೇಶದಿಂದ ಬ್ಯಾಟರಿಗಳನ್ನು ನುಂಗಿದ್ದಾಳೆ ಎಂದು ತಿಳಿದುಬಂದಿದೆ.
ಮಹಿಳೆ ಕೈಗೆ ಸಿಕ್ಕ ಬ್ಯಾಟರಿಗಳನ್ನೆಲ್ಲಾ ನುಂಗಿರುವುದಾಗಿ ತಿಳಿಸಿದ್ದಾಳೆ. ಆದರೆ ಎಷ್ಟು ಬ್ಯಾಟರಿಗಳನ್ನು ನುಂಗಿದ್ದಾಳೆ ಎಂಬ ಲೆಕ್ಕ ಆಕೆಯೂ ಇಟ್ಟುಕೊಂಡಿರಲಿಲ್ಲ. ಆಕೆ ಆಸ್ಪತ್ರೆಗೆ ದಾಖಲಾದ ಬಳಿಕ ಆಕೆಯ ಹೊಟ್ಟೆಯ ಭಾಗದ ಎಕ್ಸ್-ರೇ ಪರೀಕ್ಷೆಯ ವೇಳೆ ಹೊಟ್ಟೆಯಲ್ಲಿ ಹಾಗೂ ಕರುಳಿನಲ್ಲಿ ಹಲವು ಬ್ಯಾಟರಿಗಳು ಇರುವುದನ್ನು ನೋಡಿ ದಂಗಾಗಿದ್ದಾರೆ.
ಬ್ಯಾಟರಿಗಳ ತೂಕದಿಂದಾಗಿ ಆಕೆಯ ಹೊಟ್ಟೆ ಹಿಗ್ಗಿದ್ದು ಮಾತ್ರವಲ್ಲದೇ ಅವು ಗುದದ್ವಾರದ ಮೂಳೆಗಳಲ್ಲೂ ನೇತಾಡಿಕೊಂಡಿದ್ದವು ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ, ಎಲ್ಲಾ ಬ್ಯಾಟರಿಗಳನ್ನೂ ತೆಗೆದುಹಾಕಿದ್ದಾರೆ.
ವೈದ್ಯರು ಶಸ್ತ್ರಚಿಕಿತ್ಸೆಯಲ್ಲಿ ಒಟ್ಟು 55 ಬ್ಯಾಟರಿಗಳನ್ನು ತೆಗೆದಿದ್ದು, ಇದು ಇಲ್ಲಿಯವರೆಗೆ ಶಸ್ತ್ರಚಿಕಿತ್ಸೆಯಲ್ಲಿ ಮನಿಷ್ಯರ ಹೊಟ್ಟೆಯಿಂದ ತೆಗೆಯಲಾದ ಅತಿ ಹೆಚ್ಚು ಬ್ಯಾಟರಿಗಳು ಎಂದು ತಿಳಿಸಿದ್ದಾರೆ.
ಮಾತ್ರವಲ್ಲದೇ ಆ ಬ್ಯಾಟರಿಗಳು ಆಕೆಯ ಜೀರ್ಣಕ್ರಿಯೆಗೆ ಯಾವುದೇ ರೀತಿಯ ತೊಂದರೆ ಕೊಟ್ಟಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.