ಕಳೆದ ಶನಿವಾರ ಬಾಲಕ ನಾಪತ್ತೆಯಾಗಿದ್ದು, ಇಂದು ಮುಂಜಾನೆ ಹೊಕಾಯ್ಡೊದ ಉತ್ತರ ಮುಖ್ಯ ದ್ವೀಪದಲ್ಲಿರುವ ಮಿಲಿಟರಿ ಕವಾಯತು(ಡ್ರಿಲ್) ಪ್ರದೇಶದಲ್ಲಿ ಕಂಡು ಬಂದಿದ್ದಾನೆ. ಅಪರಿಚಿತ ಬಾಲಕನ ಬಳಿ ಸೈನಿಕ ನೀ ಯಾರೆಂದು ಕೇಳಿದಾಗ ತಾನು ಯಮಾತೋ ತನೂಕಾ( ಕಾಣೆಯಾಗಿದ್ದ ಬಾಲಕನ ಹೆಸರು) ಎಂದಿದ್ದಾನೆ.
ಕಾಡಿನಲ್ಲಿ ಒಬ್ಬನೇ ನಡೆಯುತ್ತ ಸಾಗಿದ ತಾನು ಕಳೆದ ಕೆಲ ದಿನಗಳ ಹಿಂದೆ ಡ್ರಿಲ್ ಪ್ರದೇಶವನ್ನು ಸೇರಿದ್ದಾಗಿ ಬಾಲಕ ಪೊಲೀಸ್ ವಿಚಾರಣೆಯಲ್ಲಿ ಹೇಳಿದ್ದಾನೆ. ಆತನೇ ನಾಪತ್ತೆಯಾಗಿದ್ದ ತಮ್ಮ ಮಗನೆಂದು ಪೋಷಕರು ಸಹ ಗುರುತಿಸಿದ್ದು ಆರೋಗ್ಯ ತಪಾಸಣೆಗಾಗಿ ಹೆಲಿಕಾಪ್ಟರ್‌ನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ. ನಿರ್ಜಲೀಕರಣದಿಂದ ಬಳಲುತ್ತಿರುವ ಬಾಲಕನ ಕೈ ಮತ್ತು ಬೆನ್ನ ಮೇಲೆ ಗೀರಿದ ಗಾಯಗಳಾಗಿವೆ. ಇಂತಹ ಸಣ್ಣಪುಟ್ಟ ಗಾಯಗಳನ್ನು ಬಿಟ್ಟರೆ ಆತ ಸಂಪೂರ್ಣವಾಗಿ ಸುರಕ್ಷಿತವನಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾರಿನಲ್ಲಿ ಹೋಗುವಾಗ ಹಿಂಬದಿ ಬರುತ್ತಿದ್ದ ಕಾರುಗಳಿಗೆ ಕಲ್ಲು ಹೊಡೆಯುತ್ತಿದ್ದ ಎಂಬ ಕಾರಣಕ್ಕೆ ಶಿಕ್ಷೆ ಕೊಡುವ ಉದ್ದೇಶದಿಂದ ತಂದೆಯಾಯಿಗಳು ಆತನನ್ನು ಕಾಡಿನಲ್ಲಿ ಬಿಟ್ಟಿದ್ದರು. 5 ನಿಮಿಗಳ ಬಳಿಕ ಅದೇ ಸ್ಥಳಕ್ಕೆ ಹೋಗಿ ನೋಡಿದಾಗ ಬಾಲಕ ಅಲ್ಲಿರಲಿಲ್ಲ. ಏಷ್ಯಾದಲ್ಲಿಯೇ ಅತಿ ಕ್ರೂರ ಕರಡಿಗಳ ತಾಣವಾಗಿರುವ, ಸೂರ್ಯನ ಬೆಳಕು ಕೂಡ ತಲುಪದ ಕರಾಳ ಕಾಡಿನಲ್ಲಿ ಬಾಲಕನನ್ನು ಬಿಟ್ಟಿದ್ದು ವಿಶ್ವದಾದ್ಯಂತ ಆತಂಕವನ್ನು ಸೃಷ್ಟಿಸಿತ್ತು. ಆತನನ್ನು ಹುಡುಕಲು ಜಪಾನ್ ಸರ್ಕಾರ ಸರ್ವ ಪ್ರಯತ್ನವನ್ನು ನಡೆಸಿತ್ತು. ಭೀಕರ ಕಾಡಿನಲ್ಲಿ ಜಪಾನ್ ಸೇನೆ ಹಗಲಿರುಳು ಕಾರ್ಯಾಚರಣೆಯನ್ನು ನಡೆಸಿತ್ತು.