ಚೀನಾವನ್ನು ಎದುರಿಸಲು ಅಮೆರಿಕ ಹೊಸ ಮೈತ್ರಿಕೂಟ: ಯುರೋಪ್, ಫ್ರಾನ್ಸ್ ಆಕ್ರೋಶ
ಶುಕ್ರವಾರ, 17 ಸೆಪ್ಟಂಬರ್ 2021 (14:07 IST)
ವಾಷಿಂಗ್ಟನ್ : ಇಂಡೊ- ಪೆಸಿಫಿಕ್ ಪ್ರದೇಶದಲ್ಲಿ ಚೀನಾವನ್ನು ಎದುರಿಸಲು ಆಸ್ಟ್ರೇಲಿಯಾ, ಬ್ರಿಟನ್ನೊಂದಿಗೆ ಅಮೆರಿಕವು ಹೊಸ ತ್ರಿಪಕ್ಷೀಯ ಭದ್ರತಾ ಮೈತ್ರಿಕೂಟವನ್ನು ರಚಿಸಿಕೊಂಡಿರುವುದಕ್ಕೆ ಫ್ರಾನ್ಸ್ ಮತ್ತು ಯುರೋಪಿಯನ್ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ.
ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾದ 'ಔಕಸ್' ಮೈತ್ರಿಕೂಟದಿಂದ ನಮ್ಮನ್ನು ಹೊರಗಿಡಲಾಗಿದೆ. ಮತ್ತೊಮ್ಮೆ ಟ್ರಂಪ್ ಯುಗ ಆರಂಭವಾಗಿದೆ ಎಂದು ಫ್ರಾನ್ಸ್ ಮತ್ತು ಯುರೋಪಿಯನ್ ಒಕ್ಕೂಟ ಹೇಳಿದೆ.
'ಅಮೆರಿಕ ಮರಳಿದೆ. ಬಹುಪಕ್ಷೀಯ ರಾಜತಾಂತ್ರಿಕತೆಯು ಅಮೆರಿಕದ ವಿದೇಶಾಂಗ ನೀತಿಗೆ ಮಾರ್ಗದರ್ಶನ ನೀಡಲಿದೆ ಎಂದು ಅಮೆರಿಕ ಹೇಳಿತ್ತು. ಆದರೆ, ಈಗ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಹಲವು ಮಿತ್ರರಾಷ್ಟ್ರಗಳನ್ನು ದೂರವಿಟ್ಟು, ಪ್ರಮುಖ ಸಮಸ್ಯೆಗಳನ್ನು ಏಕಾಂಗಿಯಾಗಿ ಎದುರಿಸುವ ಮಾರ್ಗವನ್ನು ಆರಿಸಿಕೊಂಡಿದ್ದಾರೆ' ಎಂದು ದೂರುಗಳು ಕೇಳಿಬಂದಿವೆ.
'ಇದು ಏನೆಂಬುದೇ ಅರ್ಥವಾಗಿಲ್ಲ. ಅಮೆರಿಕ ಬೆನ್ನಿಗೆ ಚೂರಿ ಹಾಕಿದೆ. ಇದು ಡೊನಾಲ್ಡ್ ಟ್ರಂಪ್ ನಡೆಯಂತೆ ಕಾಣಿಸುತ್ತಿದೆ' ಎಂದು ಫ್ರಾನ್ಸ್ನ ವಿದೇಶಾಂಗ ಸಚಿವರು ಟೀಕಿಸಿದರೆ, ಯುರೋಪಿಯನ್ ಒಕ್ಕೂಟದ ವಿದೇಶಾಂಗ ನೀತಿಯ ಮುಖ್ಯಸ್ಥರು, 'ನಮ್ಮೊಂದಿಗೆ ಅಮೆರಿಕ ಈ ಬಗ್ಗೆ ಸಮಾಲೋಚಿಸಿಲ್ಲ' ಎಂದು ದೂರಿದ್ದಾರೆ.
ಜೋ ಬೈಡನ್ ಅವರ ಈ ನಡೆಯನ್ನು ಕೆಲವರು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 'ಅಮೆರಿಕ ಮೊದಲು' ಎಂಬ ಪರಿಕಲ್ಪನೆಗೆ ಹೋಲಿಕೆ ಮಾಡಿದ್ದಾರೆ.
ಈ ವಾರ ಅಮೆರಿಕ, ಬ್ರಿಟನ್ ಮತ್ತು ಆಸ್ಟ್ರೇಲಿಯಾ ನೂತನ ರಕ್ಷಣಾ ಮೈತ್ರಿಯನ್ನು ಘೋಷಿಸಿವೆ. ಈ ಬಗ್ಗೆ ಆಕ್ರೋಶ ವ್ಯಕ್ಯಪಡಿಸಿರುವ ಚೀನಾ, 'ಅಮೆರಿಕ ಮತ್ತು ಅದರ ಇಂಗ್ಲಿಷ್ ಮಾತನಾಡುವ (ಬ್ರಿಟನ್, ಆಸ್ಟ್ರೇಲಿಯಾ) ಪಾಲುದಾರರು ಜಾಗತಿಕ ಭದ್ರತೆಗೆ ಧಕ್ಕೆಯುಂಟಾಗುವಂತೆ ಫೆಸಿಫಿಕ್ ಅನ್ನು ಅಸ್ಥಿರಗೊಳಿಸುವ ಯೋಜನೆಯನ್ನು ಆರಂಭಿಸಿದ್ದಾರೆ' ಎಂದಿದೆ.
ಈ ಮೈತ್ರಿಕೂಟವನ್ನು ಘೋಷಿಸುವ ಮುನ್ನವೇ ಫ್ರಾನ್ಸ್ಗೆ ಇದರ ಕುರಿತಾಗಿ ಮಾಹಿತಿ ನೀಡಲಾಗಿತ್ತು. ಕಳೆದ 24-48 ಗಂಟೆಗಳಲ್ಲಿ ಫ್ರಾನ್ಸ್ ಜತೆ ಮಾತುಕತೆ ನಡೆದಿತ್ತು ಎಂಬುದಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಯಂಟೊನಿ ಬ್ಲಿಂಕೆನ್ ಸ್ಪಷ್ಟನೆ ನೀಡಿದರು.