ಕೀವ್ : ಉಕ್ರೇನ್ ಮೇಲೆ ರಷ್ಯಾ ಪಡೆಗಳು ರಣಹದ್ದುಗಳಂತೆ ಮುಗಿಬಿದ್ದು ಭಾರೀ ವಿಧ್ವಂಸ ಸೃಷ್ಟಿಸುತ್ತಿವೆ.
ಎರಡು ದಿನಗಳಿಂದ ಭಾರೀ ದಾಳಿ ನಡೆಯುತ್ತಿದ್ದು, ರಷ್ಯಾ-ಉಕ್ರೇನ್ ಸೈನಿಕರ ಜೊತೆಗೆ ನಾಗರೀಕರ ಅಪಾರ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ.
ಪ್ರಧಾನ ನಗರಗಳನ್ನು ಗುರಿಯಾಗಿಸಿಕೊಂಡು ರಷ್ಯಾ ಪಡೆಗಳು ದಾಳಿ ಮುಂದುವರೆಸಿವೆ. ಸರ್ಕಾರಿ ಆಸ್ತಿಗಳು, ಕಚೇರಿಗಳ ಜೊತೆ ಜೊತೆಗೆ ಈಗ ಪೌರರನ್ನು ಗುರಿಯಾಗಿಸಿಕೊಂಡು ವಿಧ್ವಂಸಕಾಂಡ ಸೃಷ್ಟಿಸ್ತಿದೆ. ಆಸ್ಪತ್ರೆಗಳು, ಶಾಲೆಗಳನ್ನು ಉಡೀಸ್ ಮಾಡುತ್ತಿದೆ.
ಡ್ರುಬಿ ನರೋದಿವ್ ಮೆಟ್ರೋ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ ನಡೆದು, ಅಪಾರ ಹಾನಿ ಸಂಭವಿಸಿದೆ. ಚೆರ್ನಿಹೀವ್ನಲ್ಲಿ ತೈಲಗಾರಗಳನ್ನು ಸ್ಫೋಟಿಸಲಾಗಿದೆ. ಖಾರ್ಕೀವ್ ನಗರದ ಮೇಲೆ ಈಗಲೂ ದಾಳಿ ಮುಂದುವರೆದಿದ್ದು, ಇಡೀ ನಗರ ಸ್ಮಶಾನ ಸದೃಶವಾಗಿದೆ.
ಕೆಲವೆಡೆ ರಷ್ಯಾ ಪಡೆಗಳು, ನಾಗರಿಕರನ್ನು ನೇರವಾಗಿ ಗುಂಡಿಟ್ಟು ಕೊಲ್ಲುತ್ತಿವೆ. ಜನಭಯಭೀತರಾಗಿದ್ದಾರೆ. ಒಬ್ಲಾಸ್ಟ್, ಬಲಾಕ್ಲಿಯಾ, ಲವಿವ್, ಮೈಕೋಲಿವ್ ನಗರಗಳ ಮೇಲೆಯೂ ದಾಳಿಗಳು ಆರಂಭವಾಗಿವೆ. ಕೀವ್ ತೊರೆಯುತ್ತಿರುವ ಪೌರರಿಗೆ ರಷ್ಯಾ ಸೇನೆ ಅಡ್ಡಿಪಡಿಸುತ್ತಿಲ್ಲ ಎನ್ನಲಾಗಿದೆ. ಈವರೆಗೂ 10ಲಕ್ಷಕ್ಕೂ ಹೆಚ್ಚು ಮಂದಿ ಉಟ್ಟಬಟ್ಟೆಯಲ್ಲಿ ಉಕ್ರೇನ್ ತೊರೆದಿದ್ದಾರೆ ಎಂದು ವರದಿಯಾಗಿದೆ.