ಬೆಂಗಳೂರು: ರಾಜಕೀಯ ಅರಾಜಕತೆಗೆ ನಲುಗುತ್ತಿರುವ ನೇಪಾಳದಲ್ಲಿರುವ ಕನ್ನಡಿಗರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನೇಪಾಳದಲ್ಲಿ ಜೆನ್ ಜಿ ಸಮೂಹದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ಪ್ರಧಾನಿ, ಅಧ್ಯಕ್ಷರು ರಾಜೀನಾಮೆ ನೀಡಿ ಪಲಾಯನ ಗೈದಿದ್ದಾರೆ. ಪ್ರಧಾನಿ ನಿವಾಸಕ್ಕೇ ಬೆಂಕಿ ಹಚ್ಚಲಾಗಿದೆ. ವಿಮಾನಗಳ ಹಾರಾಟವೂ ರದ್ದಾಗಿದೆ. ಹೀಗಾಗಿ ಈ ದೇಶದಲ್ಲಿ ಸಿಲುಕಿರುವ ವಿದೇಶೀಯರು ಆತಂಕಕ್ಕೀಡಾಗಿದ್ದಾರೆ.
ನೇಪಾಳದಲ್ಲಿ ಸಾಕಷ್ಟು ಜನ ಕನ್ನಡಿಗರೂ ಇದ್ದು ಅವರ ರಕ್ಷಣೆಗೆ ರಾಜ್ಯ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಸಿಎಂ ಸಿದ್ದರಾಮಯ್ಯ ನೇಪಾಳದ ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಕನ್ನಡಿಗರೆಲ್ಲರೂ ಸುರಕ್ಷಿತರಾಗಿದ್ದಾರೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ದೆಹಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತರು ವಿವಿಧ ತಂಡಗಳಲ್ಲಿ ಇರುವ ಕನ್ನಡಿಗರ ಸಂಪರ್ಕದಲ್ಲಿದ್ದಾರೆ.
ರಾಜ್ಯ ಸರ್ಕಾರದ ಅಧಿಕಾರಿಗಳು ವಿದೇಶಾಂಗ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು, ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.