ಧೂಮಪಾನಗಳಲ್ಲಿ ಕೋವಿಡ್ ತೀವ್ರತೆ ಹೆಚ್ಚು: ಬ್ರಿಟನ್ ನ ಅಧ್ಯಯನ
ಗುರುವಾರ, 30 ಸೆಪ್ಟಂಬರ್ 2021 (10:42 IST)
ಲಂಡನ್, ಸೆ.30 : ಧೂಮಪಾನವು ಕೊರೋನ ಸೋಂಕಿನ ತೀವ್ರತೆಯನ್ನು ಮತ್ತು ಸಾವನ್ನಪ್ಪುವ ಅಪಾಯವನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಬ್ರಿಟನ್ನಲ್ಲಿ ನಡೆಸಿರುವ ಅಧ್ಯಯನದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
'ಥೊರಾಕ್ಸ್' ನಿಯತಕಾಲಿಕದಲ್ಲಿ ಸೋಮವಾರ ಪ್ರಕಟವಾದ ವರದಿಯು, ಧೂಮಪಾನಿಗಳಲ್ಲಿ ಕೊರೋನ ಸೋಂಕಿನ ತೀವ್ರತೆ ಕಡಿಮೆ ಎಂಬ ಈ ಹಿಂದಿನ ಅಭಿಪ್ರಾಯಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಆಕ್ಸ್ಫರ್ಡ್ ವಿವಿಯ ತಂಡವೊಂದು ವೀಕ್ಷಣೆ ಮತ್ತು ಅನುವಂಶಿಕ ಅಂಕಿಅಂಶ , ಪ್ರಾಥಮಿಕ ಆರೋಗ್ಯ ಕೇಂದ್ರದ ದಾಖಲೆಗಳು, ಕೊರೋನ ಸೋಂಕು ಪರೀಕ್ಷೆಯ ಫಲಿತಾಂಶ, ಆಸ್ಪತ್ರೆಗಳಲ್ಲಿ ದಾಖಲಾಗಿರುವವರ ಅಂಕಿಅಂಶ, ಮರಣ ಪ್ರಮಾಣಪತ್ರಗಳನ್ನು ಆಧರಿಸಿ ಈ ವರದಿ ಸಿದ್ಧಪಡಿಸಿದ್ದು, 2020ರ ಜನವರಿಯಿಂದ ಆಗಸ್ಟ್ವರೆಗೆ 4,21,469 ಕೊರೋನ ಸೋಂಕಿತರ ಮಾಹಿತಿಯನ್ನು ಪರಿಶೀಲಿಸಲಾಗಿದೆ.
ಇವರಲ್ಲಿ ಶೇ.37% ರಷ್ಟು ಮಂದಿ ಈ ಹಿಂದೆ ಧೂಮಪಾನಿಗಳಾಗಿದ್ದವರು ಮತ್ತು 59% ಮಂದಿ ಧೂಮಪಾನದ ಅಭ್ಯಾಸ ಇಲ್ಲದವರು. ಕೇವಲ ಶೇ.4%ರಷ್ಟು ಮಂದಿ ಮಾತ್ರ ಈಗಲೂ ಧೂಮಪಾನ ಮಾಡುವವರು. ಈಗಲೂ ಧೂಮಪಾನ ಮಾಡುವವರಲ್ಲಿ ಶೇ 71% ರಷ್ಟು ಮಂದಿ ಕಡಿಮೆ ಅಥವಾ ಸಾಧಾರಣ ಪ್ರಮಾಣದಲ್ಲಿ ಧೂಮಪಾನ ಮಾಡುವವರಾಗಿದ್ದು ದಿನಕ್ಕೆ 1ರಿಂದ 19 ಸಿಗರೇಟಿನ ಅಗತ್ಯವಿರುವವರು. ಸುಮಾರು ಶೇ. 29% ರಷ್ಟು ಮಂದಿ ಗರಿಷ್ಟ ದೂಮಪಾನಿಗಳಾಗಿದ್ದು ದಿನಕ್ಕೆ ಕನಿಷ್ಟ 20 ಸಿಗರೇಟು ಸೇದುವವರು.
ಇದುವರೆಗೆ ಧೂಮಪಾನ ಮಾಡಿರದ ವ್ಯಕ್ತಿಗಳಿಗೆ ಹೋಲಿಸಿದರೆ, ಈಗಲೂ ಧೂಮಪಾನ ಮಾಡುವವರು ಕೊರೋನ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವ ಮತ್ತು ಮರಣವನ್ನಪ್ಪುವ ಸಾಧ್ಯತೆ ಶೇ.80%ರಷ್ಟು ಅಧಿಕವಾಗಿದೆ. ಧೂಮಪಾನಕ್ಕೆ ಸಂಬಂಧಸಿದ ಅನುವಂಶಿಕ ಪ್ರವೃತ್ತಿಯು ಸೋಂಕಿಗೆ ಒಳಗಾಗುವ ಸಾಧ್ಯತೆಯನ್ನು 45% ಮತ್ತು ಆಸ್ಪತ್ರೆಗೆ ದಾಖಲಾಗುವ ಅಪಾಯವನ್ನು ಶೇ.60% ರಷ್ಟು ಹೆಚ್ಚಿಸುತ್ತದೆ.
ಪರಿಸರಕ್ಕೆ ಒಡ್ಡಿಕೊಳ್ಳುವಿಕೆ ಮತ್ತು ಅನುವಂಶಿಕ ಪ್ರವೃತ್ತಿ ಹಾಗೂ ಅನಾರೋಗ್ಯದ ನಡುವಿರುವ ಸಂಪರ್ಕದ ಬಗ್ಗೆ ದೀರ್ಘಾವಧಿಯಿಂದ ಅಧ್ಯಯನ ಕಾರ್ಯ ನಡೆಸುತ್ತಿರುವ ಯುಕೆ ಬಯೊಬ್ಯಾಂಕ್ನಿಂದ ಈ ಅಂಕಿಅಂಶಗಳನ್ನು ಸಂಗ್ರಹಿಸಲಾಗಿದೆ ಎಂದು ಅಧ್ಯಯನ ವರದಿ ಹೇಳಿದೆ.