ಮಿಚಿಗನ್ ನಿವಾಸಿ 64 ವರ್ಷದ ಬಾಬ್ ಹೊಸ ವರ್ಷದ ಮುನ್ನಾದಿನ ಉರುವಲು ಸಂಗ್ರಹಿಸಲು ಹಿಮಪ್ರದೇಶದಲ್ಲಿ ಸಾಗುತ್ತಿದ್ದಾಗ ಕುತ್ತಿಗೆಯ ಭಾಗಕ್ಕೆ ಪಾರ್ಶ್ವವಾಯುಗೊಳಗಾಗಿ ಕುಸಿದು ಬಿದ್ದಿದ್ದಾರೆ. ಆ ಸಮಯದಲ್ಲಿ ಅವರ ಮನೆಯಲ್ಲಿ ಕೂಡ ಯಾರೂ ಇರಲಿಲ್ಲ. ಸುತ್ತಮುತ್ತಲೂ ಸಹ ಮನೆಗಳಿರಲಿಲ್ಲ. ಏಳಲಾಗದೇ ಪರದಾಡುತ್ತಿದ್ದ ಅವರು ಕೂಗಿಕೊಂಡರೂ ಕಾಲು ಕೀಲೋಮೀಟರ್‌ಗಳಷ್ಟು ದೂರದ ಮನೆಗಳಿಗೆ ಕೇಳಿಸಲೇ ಇಲ್ಲ. ಆಗ ರಾತ್ರಿ 10.30 ಆಗಿದ್ದರಿಂದ ಜನಸಂಚಾರವೂ ಇರಲಿಲ್ಲ.
ಇನ್ನೇನು ಚಳಿಯಿಂದಾಗಿ ಅನರು ಕೋಮಾವಸ್ಥೆಗೆ ಜಾರಬೇಕಿತ್ತು, ಸಾವು ಕೂಡ ಅವರ ಹತ್ತಿರದಲ್ಲಿತ್ತು. ಅಷ್ಟರಲ್ಲಿ ಅವರ ಪ್ರೀತಿಯ ಸಾಕುನಾಯಿ 5 ವರ್ಷದ ಗೋಲ್ಡನ್ ರಿಟ್ರೈವರ್ ಕೆಲ್ಸೀಯ್ ಓಡೋಡಿ ಬಂದಿದೆ. ತನ್ನ ಮಾಲೀಕನಿಗಾದ ಸ್ಥಿತಿ ಕಂಡು ಕಂಗಾಲಾದ ಅದು ಆತನ ದೇಹವೇರಿ ಕುಳಿತು ಮೈಶಾಖ ನೀಡಿ ಚಳಿಯಿಂದ ಕಾಪಾಡಲು ಪ್ರಯತ್ನಿಸಿದೆ. ಕೈ ಮತ್ತು ಮುಖವನ್ನು ನಿರಂತರವಾಗಿ ನೆಕ್ಕುತ್ತ ಅವರನ್ನು ಎಚ್ಚರವಾಗಿರಿಸಿದೆ. ಜತೆಗೆ ಜೋರಾಗಿ ಬೊಗಳುತ್ತ ಹತ್ತಿದವರನ್ನು ಸಹಾಯಕ್ಕಾಗಿ ಕರೆದಿದೆ. ಆದರೆ ಹೊಸವರ್ಷದ ಸಂಜೆಯವರೆಗೂ ಯಾರು ಕೂಡ ಅತ್ತ ಸುಳಿದಿಲ್ಲ. ಆದರೆ ನಾಯಿ ಬೊಗಳುವುದನ್ನು ಮುಂದುವರೆಸಿದ್ದು ಸಂಜೆ 6.30 ರ ಸುಮಾರಿಗೆ ಸ್ಥಳೀಯರೊಬ್ಬರು ಬಾಬ್ ಸಹಾಯಕ್ಕೆ ಬಂದಿದ್ದಾರೆ.