ಥಾಯ್ಲೆಂಡ್‌ ಮಾಜಿ ಪ್ರಧಾನಿ ಥಾಕ್ಸಿನ್ ಶಿನ್ವಾತ್ರಾಗೆ ಮತ್ತೇ ಜೈಲೇ ಗತಿ: ಸುಪ್ರೀಂ ತೀರ್ಪಿಗೆ ವಿಶ್ವವೇ ಬೆರಗು

Sampriya

ಮಂಗಳವಾರ, 9 ಸೆಪ್ಟಂಬರ್ 2025 (19:01 IST)
Photo Credit X
ಬ್ಯಾಂಕಾಕ್‌: ಅಕ್ರಮ ಸಂಪಾದನೆ ಮತ್ತು ಅಧಿಕಾರ ದುರುಪಯೋಗ ಆರೋಪದಲ್ಲಿ ಶಿಕ್ಷೆಗೆ ಒಳಗಾಗಿರುವ ಥಾಯ್ಲೆಂಡ್ ಮಾಜಿ ಪ್ರಧಾನಿ ಥಾಕ್ಸಿನ್ ಶಿನ್ವಾತ್ರಾಗೆ ಇನ್ನೊಂದು ವರ್ಷ ಜೈಲೇ ಗತಿಯಾಗಿದೆ. 

ಸುಪ್ರೀಂಕೋರ್ಟ್ ಈ ಸಂಬಂಧ ಮಹತ್ವದ ಆದೇಶವನ್ನು ಹೊರಡಿಸಿದೆ. 

ಶಿಕ್ಷೆಯು 2023ರಲ್ಲೇ ಆರಂಭವಾಗಬೇಕಿತ್ತು. ಆದರೆ ಅಧಿಕಾರಿಗಳ ತಪ್ಪಿನಿಂದಾಗಿ ಅದು ವಿಳಂಬವಾಗಿದೆ ಎಂಬ ಆರೋಪ ಕುರಿತ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.

ಥಾಕ್ಸಿನ್‌ ಅವರಿಗೆ ವಿಧಿಸಿದ ಶಿಕ್ಷೆಯನ್ನು ಅಧಿಕಾರಿಗಳು ಸಮರ್ಪಕವಾಗಿ ಜಾರಿಗೆ ತಂದಿಲ್ಲ ಎಂದು ನ್ಯಾಯಾಧೀಶರು ಅಸಮಾಧಾನ ಹೊರಹಾಕಿದ್ದಾರೆ. ಆಸ್ಪತ್ರೆಯಲ್ಲಿ ಇದ್ದ ಮಾತ್ರಕ್ಕೆ ಅದನ್ನು ಶಿಕ್ಷೆ ಎಂದು ಪರಿಗಣಿಸಲು ಸಾಧ್ಯವಾಗುವುದಿಲ್ಲ ಅವರು ಜೈಲಿನಲ್ಲಿ ಸಂಪೂರ್ಣ ದಿನವನ್ನು ಕಳೆದರಷ್ಟೇ ಶಿಕ್ಷೆಯು ಸಂಪೂರ್ಣವಾಗುತ್ತದೆ ಎಂದು ಗುಡುಗಿದ್ದಾರೆ.

ಸ್ವಯಂ ಗಡಿಪಾರಾಗಿದ್ದ ಮಾಜಿ ಪ್ರಧಾನಿ ಆಕ್ಸಿನ್‌ ದಶಕದ ನಂತರ ಸ್ವದೇಶಕ್ಕೆ ಮರಳಿದ್ದರು. ವೈದ್ಯಕೀಯ ಕಾರಣ ನೀಡಿ ಮಧ್ಯರಾತ್ರಿ ಅವರನ್ನು ಬ್ಯಾಂಕಾಕ್‌ನಲ್ಲಿರುವ ಪೊಲೀಸ್ ಜನರಲ್ ಆಸ್ಪತ್ರೆಯ ವಿಶೇಷ ಕೊಠಡಿಗೆ ಸ್ಥಳಾಂತರಿಸಲಾಗಿತ್ತು. ಇವರ ವಿರುದ್ಧದ ಪ್ರಕರಣದಲ್ಲಿ ಒಟ್ಟು ಎಂಟು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಆದರೆ ರಾಜ ಮಹಾ ವಜೀರ್‌ಲಾಂಗ್‌ಕಾರ್ನ್ ಅವರು ಶಿಕ್ಷೆಯನ್ನು ಒಂದು ವರ್ಷಕ್ಕೆ ಇಳಿಸಿದರು. ಆಸ್ಪತ್ರೆಯ ವಾಸದ ನಂತರ ಪರೋಲ್‌ ಮೇಲೆ ಥಾಕ್ಸಿನ್ ಹೊರಬಂದಿದ್ದರು.

ಥಾಕ್ಸಿನ್‌ಗೆ ಆ ವಿಶೇಷ ಚಿಕಿತ್ಸೆ ದೊರೆಯಿತೇ ಮತ್ತು ಅವರು ನಿಜವಾಗಿಯೂ ಅನಾರೋಗ್ಯಕ್ಕೆ ತುತ್ತಾಗಿದ್ದರೇ ಎಂದು ಹಲವರು ಪ್ರಶ್ನಿಸಿದ್ದಾರೆ. 

ಇನ್ನೂ ನ್ಯಾಯಾಲಯದಿಂದ ಇಂದು ಮಹತ್ವದ ಆದೇಶ ಸಂಬಂಧ ತಮ್ಮ ಇಬ್ಬರು ಮಕ್ಕಳೊಂದಿಗೆ ನ್ಯಾಯಾಲಯಕ್ಕೆ ಥಾಕ್ಸಿನ್ ಬಂದಿದ್ದರು. 

ಇನ್ನೂ ಜೈಲಿಗೆ ಹೋಗುವ ಮೊದಲು ಸಾಮಾಜಿಕ ಮಾಧ್ಯಮದಲ್ಲಿ ವಿಷಯ ಹಂಚಿಕೊಂಡಿರುವ ಅವರು, ‘ಭವಿಷ್ಯವನ್ನು ನೋಡಬಯಸುತ್ತೇನೆ. ಎಲ್ಲದಕ್ಕೂ ಕೊನೆ ಹಾಡಬೇಕಿದೆ. ಅದು ಕಾನೂನು ಕ್ರಮವೇ ಆಗಲಿ ಅಥವಾ ಯಾವುದೇ ಸಮಸ್ಯೆ ನನ್ನಿಂದ ಅಥವಾ ನನಗೆ ಸಂಬಂಧಿಸಿದ್ದೇ ಆಗಲಿ. ಇಂದಿನಿಂದ ನಾನು ಸ್ವಾತಂತ್ರ್ಯವಿಲ್ಲದೆ ಬದುಕಬೇಕಾಗಿದೆ. ಆದರೆ ದೇಶ ಮತ್ತದರ ಜನರ ಪರವಾಗಿ ಆಲೋಚಿಸಲು ನಾನು ಸ್ವತಂತ್ರನಾಗಿದ್ದೇನೆ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ