ಮುಜಫರಾಬಾದ್ : ಕಳೆದ ಏಳು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿರುವ ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ಇದೀಗ ತನಗೆ ಮತ್ತು ತನ್ನ ಮಕ್ಕಳಿಗೆ ಜೀವ ಬೆದರಿಕೆ ಇರುವ ಕಾರಣ ಆಶ್ರಯ ಮತ್ತು ರಕ್ಷಣೆಗಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಸಹಾಯವನ್ನು ಕೋರಿದ್ದಾರೆ.
ಭಾವನಾತ್ಮಕ ವೀಡಿಯೊ ಸಂದೇಶದಲ್ಲಿ, ಮಾರಿಯಾ ತಾಹಿರ್ "ನಾನು ಕಳೆದ ಏಳು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿರುವ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ. ನನಗೆ ನ್ಯಾಯ ಒದಗಿಸಲು ಪಿಒಜೆಕೆ ಪೊಲೀಸರು, ಸರ್ಕಾರಗಳು ಮತ್ತು ನ್ಯಾಯಾಂಗವು ವಿಫಲವಾಗಿವೆ" ಎಂದು ಹೇಳಿದ್ದಾರೆ.
"ಈ ವಿಡಿಯೋದ ಮೂಲಕ ನಾನು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಭಾರತಕ್ಕೆ ಬರಲು ಅವಕಾಶ ನೀಡುವಂತೆ ಮನವಿ ಮಾಡುತ್ತಿದ್ದೇನೆ. ನನ್ನ ಮಕ್ಕಳಿಗೆ ಜೀವ ಬೆದರಿಕೆ ಇದೆ. ಸ್ಥಳೀಯ ಪೊಲೀಸರು ಮತ್ತು ಹಿರಿಯ ರಾಜಕಾರಣಿ ಚೌಧರಿ ತಾರಿಕ್ ಫಾರೂಕ್ ಅವರು ನನ್ನನ್ನು ಮತ್ತು ನನ್ನ ಮಕ್ಕಳನ್ನು ಯಾವಾಗ ಬೇಕಾದರೂ ಕೊಲ್ಲುತ್ತಾರೆ.
ನಮಗೆ ಆಶ್ರಯ ಮತ್ತು ರಕ್ಷಣೆ ನೀಡುವಂತೆ ನಾನು ಪ್ರಧಾನಿ ಮೋದಿಯನ್ನು ವಿನಂತಿಸಲು ಬಯಸುತ್ತೇನೆ" ಎಂದು ಹೇಳಿದ್ದಾರೆ. 2015ರಲ್ಲಿ ತಮ್ಮ ಮೇಲೆ ಗ್ಯಾಂಗ್ ರೇಪ್ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವ ನಿಟ್ಟಿನಲ್ಲಿ ತೀವ್ರ ಹೋರಾಟ ಮಾಡುತ್ತಿದ್ದು,
ತಮ್ಮ ಹಿಂದಿನ ವಿಡಿಯೋದಲ್ಲಿ ಅದರ ಬಗ್ಗೆ ವಿಸ್ತ್ರತವಾಗಿ ತಿಳಿಸಿದ್ದರು. "ಹರೂನ್ ರಶೀದ್, ಮಮೂನ್ ರಶೀದ್, ಜಮೀಲ್ ಶಫಿ, ವಕಾಸ್ ಅಶ್ರಫ್, ಸನಮ್ ಹರೂನ್ ಮತ್ತು ಇನ್ನೂ ಮೂವರು ನನ್ನ ವಿರುದ್ಧದ ಅಪರಾಧದಲ್ಲಿ ಭಾಗಿಯಾಗಿದ್ದಾರೆ" ಎಂದು ಅವರು ಹೇಳಿದ್ದರು.