ರಿಯಾದ್: 15ನೇ ವಯಸ್ಸಿನಲ್ಲಿ ಕೋಮಾಕ್ಕೆ ಜಾರಿದ್ದ ಸೌದಿ ಅರೇಬಿಯಾದ ರಾಜಕುಮಾರ 20 ವರ್ಷಗಳ ಕಾಲ ಸಾವು–ಬದುಕಿನ ನಡುವೆ ಹೋರಾಟ ನಡೆಸಿ ಶನಿವಾರ ನಿಧನರಾಗಿದ್ದಾರೆ.
ಸ್ಲೀಪಿಂಗ್ ಪ್ರಿನ್ಸ್ ಎಂದೇ ಹೆಸರಾಗಿದ್ದ ಸೌದಿ ಅರೇಬಿಯಾದ ರಾಜಕುಮಾರ ಅಲ್-ವಲೀದ್ ಬಿನ್ ಖಾಲಿದ್ ಬಿನ್ ತಲಾಲ್ ಬಿನ್ ಅಬ್ದುಲಜೀಜ್ ಅಲ್ ಸೌದ್ (36) ನಿಧನರಾಗಿದ್ದಾರೆ. ಇಂದು ರಿಯಾದ್‌ನಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಂದೆ ಪ್ರಿನ್ಸ್ ಖಾಲಿದ್ ಬಿನ್ ತಲಾಲ್ ಬಿನ್ ಅಬ್ದುಲಜೀಜ್ ತಿಳಿಸಿದ್ದಾರೆ.
ಗೌರವ ಸೂಚಕವಾಗಿ ಮುಂದಿನ ಮೂರು ದಿನಗಳ ಕಾಲ ಸಂತಾಪ ಸಭೆ ನಡೆಸಲಾಗುವುದು ಎಂದು ಪ್ರಿನ್ಸ್ ಖಾಲಿದ್ ಹೇಳಿದ್ದಾರೆ. ಮಗನ ಮೇಲೆ ಅಪಾರ ಪ್ರೀತಿ ಹೊಂದಿದ್ದ ಪ್ರಿನ್ಸ್ ಖಾಲಿದ್, ಅವನ ಬದುಕು– ಸಾವು ದೇವರಿಚ್ಛೆ ಎಂದು ಹಿಂದೆ ಹಲವು ಬಾರಿ ಹೇಳಿಕೊಂಡಿದ್ದರು.
ನಮ್ಮ ಪ್ರೀತಿಯ ಪುತ್ರ, ರಾಜಕುಮಾರ ಅಲ್-ವಲೀದ್ ಬಿನ್ ಖಾಲಿದ್ ಬಿನ್ ತಲಾಲ್ ಬಿನ್ ಅಬ್ದುಲಜೀಜ್ ಅಲ್ ಸೌದ್ ನಿಧನಕ್ಕೆ ನಾವು ತೀವ್ರ ಶೋಕಿಸುತ್ತೇವೆ. ಸರ್ವಶಕ್ತನಾದ ಅಲ್ಲಾಹನು ಅವರಿಗೆ ಸ್ವರ್ಗದಲ್ಲಿ ಸ್ಥಾನ ನೀಡಲಿ. ಕುಟುಂಬಸ್ಥರು ಮತ್ತು ಪ್ರೀತಿಪಾತ್ರರಿಗೆ ಸಾಂತ್ವನ ನೀಡಲಿ ಎಂದು ನಾವು ಪ್ರಾರ್ಥಿಸುತ್ತೇವೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಿನ್ಸ್ ಖಾಲಿದ್ ಭಾವುಕ ಪೋಸ್ಟ್ ಹಾಕಿದ್ದಾರೆ.
2005ರಲ್ಲಿ ಲಂಡನ್ ಮಿಲಿಟರಿ ಕಾಲೇಜಿನಲ್ಲಿ ಓದುತ್ತಿದ್ದಾಗ ರಾಜಕುಮಾರ ಅಲ್-ವಲೀದ್ ಅವರಿಗೆ ಅಪಘಾತವಾಗಿತ್ತು. ಅಪಘಾತದಲ್ಲಿ ಮಿದುಳಿನ ರಕ್ತಸ್ರಾವವಾಗಿತ್ತು. ಬಳಿಕ ಅವರನ್ನು ರಿಯಾದ್‌ನ ಕಿಂಗ್ ಅಬ್ದುಲಜೀಜ್ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. 20 ವರ್ಷದಿಂದ ಕೋಮದಲ್ಲೇ ಇದ್ದು, ಈಗ ಉಸಿರು ಚೆಲ್ಲಿದ್ದಾರೆ.