24 ಶಸ್ತ್ರಚಿಕಿತ್ಸೆ ನೆಡೆಸಿದರೂ ತೀರದ 'ಟ್ರೀ ಮ್ಯಾನ್' ಸಮಸ್ಯೆ

ಅತಿಥಾ

ಮಂಗಳವಾರ, 6 ಫೆಬ್ರವರಿ 2018 (16:06 IST)
ಬಾಂಗ್ಲಾದೇಶದ ಟ್ರೀ ಮ್ಯಾನ್ ಎಂದೇ ಕರೆಯಲಾಗುವ ರಿಕ್ಷಾ ಚಾಲಕ ಅಬುಲ್ ಬಜಂದಾರ್, ಸುಮಾರು 10 ವರ್ಷಗಳಿಂದ ಎಪಿಡರ್ಮಾಡಿಸ್ಪ್ಲಾಸಿಯಾ ವೆರ್ರುಕಫಾರ್ಮಿಸ್ ಎಂಬ ವಿಚಿತ್ರ ರೋಗದಿಂದ ಬಳಲುತ್ತಿದ್ದು, ಡಾಕಾದಲ್ಲಿರುವ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ರೋಗದಿಂದ ಅವರ ಕೈ ಬೆರಳು ಮತ್ತು ಕಾಲಿನ ಬೆರಳುಗಳು ಸಂಪೂರ್ಣವಾಗಿ ಮರದ ತೊಗಟೆಯ ರೀತಿಯಲ್ಲಿ ಬದಲಾವಣೆಯಾಗಿದ್ದವು, ಅಲ್ಲದೇ ಆಸ್ಪತ್ರೆಯ ವೈದ್ಯರಿಗೂ ಸಹ ಈ ಕಾಯಿಲೆಯನ್ನು ಗುಣಪಡಿಸುವುದು ದೊಡ್ಡ ಸವಾಲಾಗಿತ್ತು ಎನ್ನಲಾಗಿದೆ.
ಇದನ್ನು ಸವಾಲಾಗಿ ತೆಗೆದುಕೊಂಡ ಆಸ್ಪತ್ರೆ ಸಿಬ್ಬಂದಿಗಳು ಸತತ 24 ಶಸ್ತ್ರಚಿಕಿತ್ಸೆಗಳನ್ನು ಮಾಡುವ ಮೂಲಕ ಸುಮಾರು ಐದು ಕೇಜಿಯಷ್ಟು ಬೆಳೆದ ತೊಗಟೆಯನ್ನು ತೆಗೆದುಹಾಕುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೇ ಎಲ್ಲರಂತೆ ನಾನು ಸಾಮಾನ್ಯ ಮನುಷ್ಯನಾಗುತ್ತೇನೆ ಎನ್ನುವ ಭರವಸೆಯಿಂದ ಆಸ್ಪತ್ರೆಯಿಂದ ಹೊರಟ ಅಬುಲ್‌ಗೆ ಬರೊಬ್ಬರಿ 12 ತಿಂಗಳುಗಳ ನಂತರ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ. ಅದೇನೆಂದರೆ ಶಸ್ತ್ರಚಿಕಿತ್ಸೆ ಮಾಡಿ ತೆಗೆದುಹಾಕಲಾಗಿದ್ದ ತೊಗಟೆಗಳು ಮತ್ತೆ ಬೆಳೆಯತೊಡಗಿವೆ. ಇದರಿಂದ 24 ಶಸ್ತ್ರಚಿಕಿತ್ಸೆಗೆ ಒಳಗಾದರೂ ಈ ಸಮಸ್ಯೆಯಿಂದ ಅಬುಲ್ ಮುಕ್ತಿ ಹೊಂದಲಾರದಂತ ಸ್ಥಿತಿ ನಿರ್ಮಾಣವಾಗಿದೆ.
 
27 ವರ್ಷದವನಾಗಿರುವ ಅಬ್ದುಲ್‌ಗೆ ಈಗಾಗಲೇ 24 ಶಸ್ತ್ರಚಿಕಿತ್ಸೆಗಳು ನೆಡೆದಿದ್ದು ಇದನ್ನು ಗುಣಪಡಿಸಲು ಪ್ರಯತ್ನಿಸುವುದಾಗಿ ಆಸ್ಪತ್ರೆಯ ತಜ್ಞ ವೈದ್ಯರಾಗಿರುವ ಸಮಂತಾ ಲಾಲ್ ಸೇನ್ ತಿಳಿಸಿದ್ದಾರೆ. ಇದು ವೈದ್ಯಕೀಯ ಇತಿಹಾಸದಲ್ಲೇ ಅಪರೂಪದ ಪ್ರಕರಣವಾಗಿದ್ದು ತಮ್ಮ ಪ್ರಯತ್ನ ಮುಂದುವರೆಸುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ ಅಬುಲ್‌ ಪ್ರಕರಣವು ಮೊದಲಿಗಿಂತಲೂ ಚಿಂತಾಜನಕವಾಗಿದೆ ಎಂದು ಸಹ ಅವರು ತಿಳಿಸಿದ್ದಾರೆ.
 
ಇದೀಗ ಮತ್ತೆ ಅದೇ ಆಸ್ಪತ್ರೆಯಲ್ಲಿ ಅಬುಲ್‌ಗೆ ಉಚಿತ ಚಿಕಿತ್ಸೆ ನೀಡುತ್ತಿದ್ದು ಅದೇ ಆಸ್ಪತ್ರೆಯ ಚಿಕ್ಕ ಕೋಣೆಯಲ್ಲಿ ಪತ್ನಿ ಹಾಗೂ 4 ವರ್ಷದ ಮಗಳು ಕೂಡ ವಾಸವಾಗಿದ್ದಾರೆ ಎನ್ನಲಾಗಿದೆ. ಅಲ್ಲದೇ ಇಗಾಗಲೇ 24 ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಹೊಸದಾಗಿ ಮಾಡುವ ಶಸ್ತ್ರಚಿಕಿತ್ಸೆಗೆ ಅಬುಲ್ ಭಯಪಡುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ