ಕ್ಯಾಲಿಫೋರ್ನಿಯಾ : ಟ್ವಿಟ್ಟರ್ ಸಹ-ಸಂಸ್ಥಾಪಕ ಜಾಕ್ ಡಾರ್ಸಿ ಅವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
“ನಾನು ಟ್ವಿಟರ್ ಅನ್ನು ಪ್ರೀತಿಸುತ್ತೇನೆ” ಎಂದು ಡಾರ್ಸಿ ಟ್ವೀಟ್ ಮಾಡಿ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿರುವ ಪರಾಗ್ ಅಗರ್ವಾಲ್ ಸಿಇಒ ಸ್ಥಾನ ವಹಿಸಿಕೊಳ್ಳಲಿದ್ದಾರೆ ಎಂದು ಜಾಕ್ ಡಾರ್ಸಿ ತಿಳಿಸಿದ್ದಾರೆ.
2009ರಲ್ಲಿ ಡಾರ್ಸಿ ಹಣಕಾಸು ಪಾವತಿ ಸಂಸ್ಥೆ ʼಸ್ಕ್ವೇರ್ʼ ಸ್ಥಾಪಿಸಿದ್ದರು. ಈ ಕಂಪನಿಯಲ್ಲಿ ಡಾರ್ಸಿ ಮುಖ್ಯ ಕಾರ್ಯನಿರ್ವಹಕರಾಗಿದ್ದಾರೆ. ಕೆಲ ದಿನಗಳ ಹಿಂದೆ ದೊಡ್ಡ ಹೂಡಿಕೆದಾರರು ಡಾರ್ಸಿ ಅವರು ಎರಡು ಕಂಪನಿಗಳನ್ನು ಪರಿಣಾಮಕಾರಿಯಾಗಿ ಮುನ್ನಡೆಸಬಹುದೇ ಎಂದು ಬಹಿರಂಗವಾಗಿ ಪ್ರಶ್ನಿಸಿದ್ದರು.
ಈ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಡಾರ್ಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಎಂಬ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿಯತೊಡಗಿತ್ತು. ಈಗ ಡಾರ್ಸಿ ಅಧಿಕೃತವಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಈ ವರ್ಷದ ಜನವರಿ 6ರ ಕ್ಯಾಪಿಟಲ್ ಹಿಲ್ ಗಲಭೆ ಮತ್ತು ಈ ಘಟನೆಯ ನಂತರ ಡೊನಾಲ್ಡ್ ಟ್ರಂಪ್ ಮಾಡಿದ ಟ್ವೀಟ್ಗಳು ಸಾರ್ವಜನಿಕ ಗಲಾಟೆಗೆ ಕಾರಣವಾಗಿದೆ ಎಂದು ಆರೋಪಿಸಿ ಟ್ವಿಟ್ಟರ್ ಕಂಪನಿ ಟ್ರಂಪ್ ಅವರ ಖಾತೆಯನ್ನು ಸಂಪೂರ್ಣವಾಗಿ ನಿಷೇಧಿಸಿತ್ತು. ಈ ನಿಷೇಧ ಕ್ರಮವನ್ನು ಡಾರ್ಸಿ ಸಮರ್ಥಿಸಿಕೊಂಡಿದ್ದರು. ಟ್ವಿಟ್ಟರ್ ಈ ಕ್ರಮ ವಿಶ್ವದೆಲ್ಲೆಡೆ ಭಾರೀ ಟೀಕೆಗೆ ಗುರಿಯಾಗಿತ್ತು.