ನೆರೆಯ ಉಕ್ರೇನ್ ಮೇಲೆ ರಷ್ಯಾದ ದಾಳಿ ಸಾಧ್ಯತೆ ದಟ್ಟವಾಗುತ್ತಿದ್ದು, ಯುದ್ಧದ ಕಾರ್ಮೋಡ ಆವರಿಸಿದೆ.
ಇದರ ಬೆನ್ನಲ್ಲೇ, ದಾಳಿಗೆ ಅಗತ್ಯವಾದ ಒಟ್ಟಾರೆ ಸೇನೆಯ ಪೈಕಿ ಶೇ.70ರಷ್ಟನ್ನು ಈಗಾಗಲೇ ರಷ್ಯಾ ಉಕ್ರೇನ್ ಗಡಿಯಲ್ಲಿ ರವಾನಿಸಿದೆ ಎಂದು ಅಮೆರಿಕದ ಗುಪ್ತಚರ ಪಡೆಗಳು ಹೇಳಿವೆ.
ಇದಕ್ಕೆ ಪ್ರತಿಯಾಗಿ ಅಮೆರಿಕ ಕೂಡ 2000 ಯೋಧರ ಪಡೆಯನ್ನು ನ್ಯಾಟೋ ಪಡೆಗಳಿಗೆ ಸಹಾಯ ನೀಡಲು ರವಾನಿಸಿದೆ. ಇದು ತ್ವೇಷ ಪರಿಸ್ಥಿತಿಯ ಸಂಕೇತವಾಗಿದೆ.
ಈಗಾಗಲೇ ರಷ್ಯಾ ಸೇನೆ ಉಕ್ರೇನ್ ಗಡಿಯಲ್ಲಿ 1 ಲಕ್ಷದಷ್ಟು ಸೈನಿಕರು ಮತ್ತು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸಜ್ಜುಗೊಳಿಸಿದೆ. ಮುಂದಿನ ಕೆಲ ದಿನಗಳಲ್ಲಿ ಇಲ್ಲಿ ಮೈಕೊರೆವ ಹಿಮ ಆವರಿಸಿಕೊಳ್ಳಲಿದ್ದು, ರಷ್ಯಾ ತನ್ನ ಸೇನಾ ಬಲವನ್ನು ಹೆಚ್ಚಿಸಲು ನೆರವು ನೀಡಲಿದೆ.
ಸದ್ಯದ ಅಂದಾಜಿನ ಪ್ರಕಾರ ದಾಳಿಗೆ ಅಗತ್ಯವಾದ ಸೇನೆಯ ಪೈಕಿ ಶೆ.70ರಷ್ಟನ್ನು ರಷ್ಯಾ ಈಗಾಗಲೇ ಗಡಿಯಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇಟ್ಟಿದೆ. ಒಂದು ವೇಳೆ ದಾಳಿ ನಡೆದಿದ್ದೇ ಹೌದಾದಲ್ಲಿ ಕನಿಷ್ಠ 50 ಸಾವಿರ ನಾಗರಿಕರು ಸಾವನ್ನಪ್ಪಲಿದ್ದಾರೆ ಎಂದು ಅಮೆರಿಕದ ಗುಪ್ತಚರ ಇಲಾಖೆ ಹೇಳಿದೆ.