ವಿಷಾನಿಲ ದಾಳಿಯಲ್ಲಿ 80ಕ್ಕೂ ಅಧಿಕ ಮಂದಿ ಮೃತಪಟ್ಟ ಬಳಿಕ ಸಿರಿಯಾ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದ ಅಮೆರಿಕ ಕಳೆದ ರಾತ್ರಿ ಕ್ಷಿಪಣಿ ದಾಳಿ ನಡೆಸಿದೆ. 60ಕ್ಕೂ ಅಧಿಕ ಕ್ಷಿಪಣಿಗಳು ದಾಳಿ ನಡೆಸಿದ್ದು, ಸಿರಿಯಾ ವಾಯುನೆಲೆಯನ್ನು ಧ್ವಂಸಗೊಳಿಸಲಾಗಿದೆ.ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ವಿಷಾನಿಲ ದಾಳಿ ತಡೆಗೆ ಅಮೆರಿಕ ಈ ದಾಳಿ ನಡೆಸಿದೆ ಎಂದು ಸ್ಪಷ್ಟಪಡಿಸಿದೆ.
ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾದ ಬಳಿಕ ನಡೆದ ಮೊದಲ ಪ್ರಮುಖ ದಾಳಿ ಇದಾಗಿದೆ. ಈ ಮೊದಲೇ ಸಿರಿಯಾ ಅಧ್ಯಕ್ಷ ಬಾಷಾ ಅಸಾದ್`ಗೆ ಎಚ್ಚರಿಕೆ ನೀಡಿದ್ದ ಟ್ರಂಪ್, ಸಿರಿಯಾದಲ್ಲಿ ನಿಷೇಧಿತ ವಿಷಾನಿಲದಿಂದ ಜನರ ಸಾವು ಉಂಟಾಗಿದೆ. ಇದಕ್ಕೆ ಅಧ್ಯಕ್ಷರೇ ನೇರ ಹೊಣೆ ಎಂದು ಆರೋಪಿಸಿದ್ದರು.
ಸಿರಿಯಾ ವಿಮಾನಗಳು ವಿಷಾನಿಲವನ್ನ ತುಂಬಿಕೊಂಡು ಟೇಕಾಪ್ ಆಗುತ್ತಿದ್ದವೆನ್ನಲಾದ ಕೇಂದ್ರ ಸಿರಿಯಾದ ಶರಾಯತ್ ವಾಯುನೆಲೆ ಮೇಲೆ ದಾಳಿ ನಡೆದಿದೆ. ರಾತ್ರಿ 8.45ಕ್ಕೆ ವಾಷಿಂಗ್ಟನ್`ನಿಂದ ತೆರಳಿದ ಅಮೆರಿಕ ಕ್ಷಿಪಣಿಗಳು ಬೆಳಗಿನ ಜಾವ 3.45ರ ಸುಮಾರಿಗೆ ದಾಳಿ ನಡೆಸಿವೆ.
ಸಿರಿಯಾದ ಮೇಲೆ ದಾಳಿ ನಡೆಸುವ ಬಗ್ಗೆ ಮೊದಲೇ ಡೊನಾಲ್ಡ್ ಟ್ರಂಪ್ ಘೋಷಿಸದಿದ್ದರೂ ನಿನ್ನೆ ದಿನಪೂರ್ತಿ ಸಿರಿಯಾ ಸರ್ಕಾರವನ್ನ ಟೀಕೆಗೈದಿದ್ದರು. ಸಿರಿಯಾ ಸರ್ಕಾರ ಅಮಾಯಕ ಜನ, ಮಹಿಳೆ ಮತ್ತು ಮಕ್ಕಳ ಬಲಿ ಪಡೆದಿದೆ ಎಂದು ಆರೋಪಿಸಿದ್ದರು.