ಲಂಡನ್: ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಐರೋಪ್ಯ ಒಕ್ಕೂಟ ಬೌದ್ಧಿಕ ಸಂಪತ್ತು ಕಚೇರಿ ನಡೆಸಿದ ಹೊಸ ಅಧ್ಯಯನ ವರದಿಯ ಪ್ರಕಾರ ಜಾಗತಿಕ ಮಟ್ಟದಲ್ಲಿ ನಕಲಿ ಸರಕುಗಳನ್ನು ರಫ್ತು ಮಾಡಿರುವ ದೇಶಗಳ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನದಲ್ಲಿದ್ದು, ಅಧಿಕ ನಕಲಿ ಸರಕುಗಳನ್ನು ರಫ್ತು ಮಾಡಿದ ಕುಖ್ಯಾತಿ ಚೀನಾ ದೇಶಕ್ಕೆ ದೊರೆತಿದೆ.
ಜಾಗತಿಕವಾಗಿ 63.2 ಪ್ರತಿಶತ ಚೀನಾ ಉತ್ಪಾದನೆಯ ನಕಲಿ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಎರಡನೇಯ ಸ್ಥಾನ ಪಡೆದುಕೊಂಡಿರುವ ಟರ್ಕಿ, ಸಿಂಗಪುರ ದೇಶಗಳು ಉತ್ಪಾದಿಸಿದ ನಕಲಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಂತಹ ನಕಲಿ ವಸ್ತುಗಳಲ್ಲಿ ಥಾಯ್ಲೆಂಡ್ ಮತ್ತು ಭಾರತದ ಪ್ರಮಾಣ ಕ್ರಮವಾಗಿ 1.9 ಪ್ರತಿಶತ 1.6 ಪ್ರತಿಶತದಷ್ಟಿವೆ.
ನಕಲಿ ಸರಕುಗಳ ರಫ್ತಿನಿಂದ ಅಧಿಕ ತೊಂದರೆ ಅನುಭವಿಸಿದ ದೇಶಗಳ ಪೈಕಿ ಅಮೆರಿಕ ಅಗ್ರ ಸ್ಥಾನದಲ್ಲಿದ್ದು, ಈ ದೇಶಕ್ಕೆ ಅತಿಹೆಚ್ಚಿನ ಪ್ರಮಾಣದ ನಕಲಿ ವಸ್ತುಗಳು ಆಮದು ಆಗಿವೆ. ಇಟಲಿ, ಫ್ರಾನ್ಸ್, ಸ್ವಿಟ್ಜರ್‌ಲೆಂಡ್ ಮತ್ತು ಜಪಾನ್ ನಂತರದ ಸ್ಥಾನಗಳಲ್ಲಿವೆ.