ಈಗಾಗಲೆ ಆರು ತಿಂಗಳಿಂದ ಉಚಿತ ಕರೆ, ಡಾಟಾ ಸೇವೆಗಳನ್ನು ನೀಡುತ್ತಿರುವ ರಿಲಯನ್ಸ್ ಜಿಯೋ ತನ್ನ ಆಫರನ್ನು ಮತ್ತೆ ಮೂರು ತಿಂಗಳು ವಿಸ್ತರಿಸಲಿದೆಯಾ? ಹೌದು ಎನ್ನುತ್ತಿವೆ ವಿಶ್ವಸನೀಯ ಮೂಲಗಳು. ಮುಂದಿನ ಮೂರು ತಿಂಗಳು ಕೊಡಲಿರುವ ಉಚಿತ ಸೇವೆಗೆ ನಾಮಮಾತ್ರ ಶುಲ್ಕ ವಿಧಿಸಲು ಮುಂದಾಗಿದೆಯಂತೆ ಕಂಪೆನಿ.
ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ವೆಲ್ ಕಮ್ ಆಫರ್ ಹೆಸರಿನಲ್ಲಿ ಉಚಿತ ಸೇವೆಗಳನ್ನು ಪ್ರಾರಂಭಿಸಿದ್ದು ಗೊತ್ತೇ ಇದೆ. ಆ ಬಳಿಕ ಹ್ಯಾಪಿ ನ್ಯೂ ಇಯರ್ ಆಫರ್ ಹೆಸರಿನಲ್ಲಿ ಮಾರ್ಚ್ 31ರವರೆಗೂ ಅದನ್ನು ಮುಂದುವರೆಸಿತು.
ಇತ್ತೀಚೆಗೆ 7.2 ಕೋಟಿ ಕನೆಕ್ಷನ್‌ಗಳ ಮೈಲಿಗಲ್ಲನ್ನು ತಲುಪಿದೆ ಕಂಪೆನಿ. ತನ್ನ ಗ್ರಾಹಕರಿಗೆ ಇನ್ನಷ್ಟು ಸೇವೆಗಳನ್ನು ಒದಗಿಸಲು ಈಗ ಮುಂದಾಗಿದೆ. ಇದಕ್ಕಾಗಿ ಸ್ವಲ್ಪ ಶುಲ್ಕದೊಂದಿಗೆ ಡಾಟಾ ಜತೆಗೆ ಉಚಿತ ಕರೆಗಳ ಸೌಲಭ್ಯವನ್ನು ನೀಡಲಿದೆ. ಕರೆಗಳಿಗೆ ಯಾವುದೇ ಶುಲ್ಕ ಭರಿಸುವ ಅಗತ್ಯವಿಲ್ಲವೆಂದೂ. ಹೊಸ ಆಫರ್ ಕೇವಲ ರೂ.100ಕ್ಕೆ ನೀಡಲು ರಿಲಯನ್ಸ್ ಮುಂದೆ ಬಂದಿದೆ.
ಈ ಹೊಸ ಆಫರನ್ನು ಜೂನ್ 30ವರೆಗೂ ವಿಸ್ತರಿಸಲು ಯೋಚಿಸಿದೆ. ಆಫರ್ ಮುಗಿಯುವುದರೊಳಗೆ ಕಾಲ್ ಡ್ರಾಪ್ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕೆಂದು ಜಿಯೋ ಭಾವಿಸಿದೆ ಎನ್ನುತ್ತಿವೆ ಮೂಲಗಳು. ಈಗಾಗಲೆ ಜಿಯೋ ಹೊಡೆತಕ್ಕೆ ಹಲವಾರು ಕಂಪೆನಿಗಳು ನೆಲಕಚ್ಚಿರುವುದು ಗೊತ್ತೇ ಇದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.