ಯೂನೈಟೆಡ್ ಬ್ರಿವರೀಸ್ ಲಿ. 2006-07 ನೇ ಹಣಕಾಸಿನ ವರ್ಷದಲ್ಲಿ 65.09 ಕೋಟಿ ರೂ ನಿವ್ವಳ ಲಾಭ ಗಳಿಸಿದ್ದು, ಹಿಂದಿನ ವರ್ಷದ ನಿವ್ವಳ ಲಾಭ (19.4ಕೋಟಿ)ಕ್ಕೆ ಹೋಲಿಸಿದರೆ ಶೇ 300ರಷ್ಟು ಪ್ರಗತಿ ಸಾಧಿಸಿದೆ.
ಕಂಪೆನಿಯ ನಿರ್ದೇಶಕ ಮಂಡಳಿಯ ಸಭೆ ವಾರ್ಷಿಕ ಅನುಮೋದನೆ ನೀಡಿದ್ದು, ಶೇ10 ಲಾಭಾಂಶ ನೀಡಲು ನಿರ್ಧರಿಸಿದೆ. ಇದರಿಂದಾಗಿ ಕಂಪೆನಿ ಈವರೆಗೆ ಒಟ್ಟು ಶೇ25 ಲಾಭಾಂಶ ನೀಡಿದಂತಾಗಿದೆ.
2006-07 ನೇ ಹಣಕಾಸಿನ ವರ್ಷದಲ್ಲಿ ಒಟ್ಟು 1156.62 ಕೋಟಿ ರೂ. ವಹಿವಾಟನ್ನು ಕಂಪೆನಿ ನಡೆಸಿತ್ತು. ಹಿಂದಿನ ವರ್ಷ ಈ ಪ್ರಮಾಣ 796.04 ಕೋಟಿ ರೂಪಾಯಿಗಳಾಗಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಂಸ್ಥೆಯ ಸ್ಟ್ರಾಂಗ್ ಬೀಯರ್‌ನ ಮಾರಾಟ ಶೇ 34.6ರ ದರದಲ್ಲಿ ಅಭಿವೃದ್ಧಿ ಸಾಧಿಸಿದರೆ, ಸೌಮ್ಯ ಬೀಯರ್ ಮಾರಾಟ ಶೇ20ರ ದರದಲ್ಲಿ ಬೆಳವಣಿಗೆ ದಾಖಲಿಸಿದೆ.
ಭಾರತೀಯ ಬೀಯರ್ ಮಾರುಕಟ್ಟೆ ವಿಶ್ವದಲ್ಲಿ ಅತಿ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಮಾರುಕಟ್ಟೆಯಾಗಿದೆ ಎಂದು ಪ್ರಕಟಣೆ ವಿವರಿಸಿದ್ದು, ದೇಶದಲ್ಲಿ ಕಿಂಗ್ ಫಿಶರ್ ಸ್ಟ್ರಾಂಗ್ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೀಯರ್ ಬ್ರಾಂಡ್ ಆಗಿದೆ ಎಂದು ಕಂಪೆನಿ ಹೇಳಿದೆ.