ಕೈಕೊಟ್ಟ ದ್ವಾರಕೀಶ್-ಸುದೀಪ್; ನೋವಿನಲ್ಲಿ ಭಾರತಿ

PR
ಅಂದು ವಿವಾದ ತಾರಕಕ್ಕೇರಿದ್ದಾಗ ಭಾರತಿ ವಿಷ್ಣುವರ್ಧನ್ ಜತೆ ದ್ವಾರಕೀಶ್ ಮತ್ತು ಕಿಚ್ಚ ಸುದೀಪ್ ಸಂಧಾನಕ್ಕೆ ಸಿದ್ಧರಾಗಿದ್ದು ನಾಟಕವೇ? ಈಗ ನಡೆಯುತ್ತಿರುವ ಬೆಳವಣಿಗೆಗಳು ಹೌದೆನ್ನುತ್ತವೆ. 'ಓನ್ಲಿ ವಿಷ್ಣುವರ್ಧನ' ಬಿಡುಗಡೆಗೂ ಮೊದಲು ಭಾರತಿಯವರಿಗೆ ಚಿತ್ರವನ್ನು ತೋರಿಸುವ ಷರತ್ತು, ಶೀರ್ಷಿಕೆ ಷರತ್ತು ಸೇರಿದಂತೆ ಅಂದಿನ ಎಲ್ಲಾ ಮಾತುಗಳನ್ನು ಗಾಳಿಗೆ ತೂರಿರುವ ಕುಳ್ಳ, ಯಾರೂ ಅಡ್ಡ ಬರೋದು ಬೇಡ ಅಂತ ಹೈಕೋರ್ಟಿನಲ್ಲಿ ಕೇವಿಯೆಟ್ ಸಲ್ಲಿಸಿ ಚಿತ್ರವನ್ನು ಗುರುವಾರ ಬಿಡುಗಡೆ ಕೂಡ ಮಾಡಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಇಷ್ಟೆಲ್ಲ ಆದರೂ ಸುದೀಪ್ ಮಾತ್ರ ವಿವಾದದ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಬದಲಿಗೆ ಸಾಹಸ ಸಿಂಹ ಡಾ. ವಿಷ್ಣುವರ್ಧನ್‌ರ ಅಪ್ಪಟ ಅಭಿಮಾನಿ ಎಂಬಂತೆ ಸಾಮಾಜಿಕ ಸಂಪರ್ಕ ತಾಣಗಳಲ್ಲಿ ಬಿಂಬಿಸಿಕೊಳ್ಳುತ್ತಾ, ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ. ತಾನು ನಾಯಕನಾಗಿರುವ 'ಓನ್ಲಿ ವಿಷ್ಣುವರ್ಧನ' ಹಿಟ್ಟಾಗಲು ಏನೆಲ್ಲ ಟ್ರಿಕ್ಸ್ ಬೇಕೋ, ಅದನ್ನೆಲ್ಲ ಒಂದೂ ಬಿಡದೆ ಮಾಡುತ್ತಿದ್ದಾರೆ!

ಮೊದಲನೆಯದಾಗಿ, ಚಿತ್ರ ಬಿಡುಗಡೆ ಬಿಡಿ; ಶೀರ್ಷಿಕೆಯನ್ನೇ ಇಡಬಾರದು. ಚಿತ್ರದ ಜಾಹೀರಾತುಗಳಲ್ಲೂ ವಿಷ್ಣುವರ್ಧನ್ ಎಂಬ ಹೆಸರು ಯಾವ ರೂಪದಲ್ಲೂ ಇರಬಾರದು. ಅವರ ಶೈಲಿಗಳು ಇರಬಾರದು. ಚಿತ್ರವನ್ನು ಭಾರತಿಯವರಿಗೆ ತೋರಿಸಿದ ನಂತರ, ಅವರು ಒಪ್ಪಿಗೆ ಸೂಚಿಸಿದ ನಂತರ ಮಾತ್ರ ಬಿಡುಗಡೆ ಮಾಡಬಹುದು, ಜಾಹೀರಾತುಗಳಲ್ಲಿ ಶೀರ್ಷಿಕೆ ಪ್ರಕಟಿಸಬಹುದು ಎಂದು ಷರತ್ತು ವಿಧಿಸಲಾಗಿತ್ತು. ಆದರೆ ಅವೆಲ್ಲವನ್ನೂ ದ್ವಾರಕೀಶ್ ಗಾಳಿಗೆ ತೂರಿದ್ದಾರೆ.

ಚಿತ್ರ ಬಿಡುಗಡೆಗೆ ಬೇಕಾದ ಎಲ್ಲಾ ಪ್ಲಾನ್‌ಗಳನ್ನೂ ಮೊದಲೇ ಸಿದ್ಧ ಮಾಡಿಕೊಂಡಿರುವ ದ್ವಾರಕೀಶ್, ಇನ್ನು ಯಾರಾದರೂ ಅಡ್ಡಿ ಮಾಡುವುದು ಬೇಡ ಎಂದು ಹೈಕೋರ್ಟಿಗೆ ಕೇವಿಯಟ್ ಕೂಡ ಸಲ್ಲಿಸಿದ್ದಾರೆ. ಅಂದರೆ ಭಾರತಿ ವಿಷ್ಣುವರ್ಧನ್ ತಕರಾರಿಗೆ ಯಾವ ಅವಕಾಶವೂ ಉಳಿದಿರಬಾರದು ಎನ್ನುವುದು ಇದರ ಹಿಂದಿನ ಉದ್ದೇಶ.

ಕಾಟಾಚಾರಕ್ಕೆ ಎಂಬಂತೆ ಬಿಡುಗಡೆಯ ಮುಂಚಿನ ದಿನ, ಅಂದರೆ ಬುಧವಾರ ಪ್ರದರ್ಶನ ಏರ್ಪಡಿಸಲಾಗಿತ್ತು. ಅದಕ್ಕೆ ಭಾರತಿಯವರನ್ನು ಆಹ್ವಾನಿಸಿಯೇ ಇರಲಿಲ್ಲ. ಕರೆದರೂ ತಾನು ಬರುವುದಿಲ್ಲ, ಈಗ ಯಾವ ಕರ್ಮಕ್ಕೆ ಪ್ರದರ್ಶನ ಇಟ್ಟಿದ್ದಾರೆ ಎಂದು ಭಾರತಿ ಅಸಮಾಧಾನ ವ್ಯಕ್ತಪಡಿಸಿದ್ದರು. ಕುಳ್ಳ ದ್ವಾರಕೀಶ್ ಇಬ್ಬಂದಿತನಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ತನ್ನ ಬೇಳೆ ಬೇಯಿಸಿಕೊಂಡ ದ್ವಾರಕೀಶ್ ವಿರುದ್ಧ ಅವರಲ್ಲಿ ಹೇಳಲು ಏನೂ ಉಳಿದಿರಲಿಲ್ಲ. ಮಾತು ತಪ್ಪಿದರು, ಸಂಧಾನಕ್ಕೆ ಬೆಲೆಯೇ ಇಲ್ಲದಂತಾಗಿದೆ, ಈಗ ಇದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದಷ್ಟೇ ಹೇಳಿದ್ದಾರೆ.

ಈ ಎಲ್ಲಾ ಪ್ರಹಸನಗಳಲ್ಲಿ ಕಿಚ್ಚ ಸುದೀಪ್ ಸಕ್ರಿಯರಾಗಿದ್ದವರು. ಅಂದು ಶೀರ್ಷಿಕೆ ವಿವಾದ ಆರಂಭವಾದಾಗಲೇ, 'ಇದು ಒಂದು ಮನೆಯೊಳಗಿನ ಜಗಳ. ಇದನ್ನು ನಾವು ಕೂತು, ಮಾತುಕತೆ ನಡೆಸಿ ಪರಿಹರಿಸಿಕೊಳ್ಳುತ್ತೇವೆ' ಎಂದಿದ್ದರು. ಆದರೆ ಸುದೀಪ್ ಮಾಡಿದ್ದೇನು? ದ್ವಾರಕೀಶ್ ಜತೆ ಸೇರಿಕೊಂಡು ತಮ್ಮ ಚಿತ್ರದ ಬಗ್ಗೆ ಯೋಚನೆ ಮಾಡಿದರೇ ಹೊರತು, ಭಾರತಿ ವಿಷ್ಣುವರ್ಧನ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸಕ್ಕೆ ಮುಂದಾಗಲೇ ಇಲ್ಲ.

ಕಿಚ್ಚ ಸುದೀಪ್ ಈ ಬಗ್ಗೆ ಈಗ ಚಮಕ್ ಕಿಮಕ್ ಎನ್ನುತ್ತಿಲ್ಲ. ಟ್ವಿಟ್ಟರ್-ಫೇಸ್‌ಬುಕ್‌ಗಳಲ್ಲಿ ಸದಾ ಸಾಹಸ ಸಿಂಹ ವಿಷ್ಣುವರ್ಧನ್ ಜಪ ಮಾಡುತ್ತಿದ್ದಾರೆ. ಅವರು ನನ್ನ ದೇವರು ಅಂತ ಹೇಳುತ್ತಿದ್ದಾರೆ. ಆದರೆ ದ್ವಾರಕೀಶ್ ಮಾತು ತಪ್ಪಿದ್ದು, ತಾನು ಸುಮ್ಮನಿರುವುದು ಯಾಕೆ ಎಂಬ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಇದನ್ನು ಪ್ರಶ್ನಿಸಿದ ಅಭಿಮಾನಿಗಳಿಗೆ ಮುಖಕ್ಕೆ ಹೊಡೆಯುವಂತಹ ಉತ್ತರಗಳನ್ನೂ ನೀಡುತ್ತಿದ್ದಾರೆ.

ಇದೇನಾ ಸಭ್ಯತೆ? ಇದೇನಾ ಸಂಸ್ಕೃತಿ? ಇದೇನಾ ಕೊಟ್ಟ ಮಾತನ್ನು ತಪ್ಪುವುದೆಂದರೆ?

ವೆಬ್ದುನಿಯಾವನ್ನು ಓದಿ