ಮತ್ತೊಂದು ಕ್ಷೇತ್ರ ಮಹಾತ್ಮೆ 'ಶ್ರೀ ಕೊಟ್ಟೂರು ಬಸವೇಶ್ವರ'

EVENTHOUSE
ಕನ್ನಡ ಚಿತ್ರರಂಗದಲ್ಲಿ ರಾಜ್ಯದ ಹಲವಾರು ಆದಿ ಕ್ಷೇತ್ರಗಳ ಮಹಿಮೆಯನ್ನು ಬೆಳ್ಳಿತೆರೆಯಲ್ಲಿ ತೋರಿಸುವ ಪ್ರಯತ್ನ ಹಿಂದೆಯೂ ಆಗಿತ್ತು ಈಗಲೂ ಮುಂದುವರಿದಿದೆ. 'ಕೈವಾರ', 'ಸಿದ್ಧಗಂಗಾ', 'ಆದಿಚುಂಚನಗಿರಿ' ಕ್ಷೇತ್ರಗಳ ನಂತರ ಈಗ ಶ್ರೀ ಕೊಟ್ಟೂರು ಕ್ಷೇತ್ರ ಹೊಸ ಸೇರ್ಪಡೆ.

ಈ ಕ್ಷೇತ್ರದ ಶ್ರೀ ಬಸವೇಶ್ವರ ಚರಿತ್ರೆಯನ್ನು ತೆರೆಯ ಮೇಲೆ ನಿರೂಪಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ ನಿರ್ದೇಶಕ ಟಿ.ಎನ್.ನಾಗೇಶ್. ಸಿಮ್ರಾನ್ ಮೂವಿ ಮೇಕರ್ಸ್ ಲಾಂಛನದಡಿ ನಿರ್ಮಿಸಲಾಗುತ್ತಿರುವ ಈ ಚಿತ್ರಕ್ಕೆ 'ಶ್ರೀ ಕೊಟ್ಟೂರು ಬಸವೇಶ್ವರ' ಎಂದು ನಾಮಕರಣ ಮಾಡಲಾಗಿದೆ.

ಕೊಟ್ಟೂರು ಕ್ಷೇತ್ರದಲ್ಲಿ ನಡೆದಂತಹ ಮಹಿಮೆಗಳೇ ಚಿತ್ರದ ವಿಶೇಷವಾದರೂ ಯಾವುದೇ ಪವಾಡ ದೃಶ್ಯಗಳನ್ನು ಚಿತ್ರದಲ್ಲಿ ತೋರಿಸುವುದಿಲ್ಲವಂತೆ. ವರ್ತಮಾನ ಕಾಲಕ್ಕನುಗುಣವಾಗಿ ವೈಜ್ಞಾನಿಕ ದೃಷ್ಟಿಕೋನದಲ್ಲೇ ನಿರೂಪಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದ್ದಾರೆ ನಿರ್ದೇಶಕ ಟಿ.ಎನ್.ನಾಗೇಶ್.

ಕಥೆ, ಸಂಭಾಷಣೆ ಮತ್ತು ಸಾಹಿತ್ಯ ರಚನೆ ಗೊಟೂರಿ ಅವರದು. 'ನೆನಪಿರಲಿ' ಖ್ಯಾತಿಯ ಪ್ರೇಮ್, 'ಪಯಣ'ದ ರವಿಶಂಕರ್ ಅವರನ್ನು ಚಿತ್ರಕ್ಕೆ ಆರಿಸಿಕೊಳ್ಳುವ ಸಾಧ್ಯತೆ ಇದೆ. ಉತ್ತರ ಕರ್ನಾಟಕದ ಬಹುತೇಕ ಕಲಾವಿದರು ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದಷ್ಟೇ ಹೇಳಿದ್ದಾರೆ 'ಪಂಚಾಮೃತ'ದಲ್ಲಿ ಬ್ಯುಸಿಯಾಗಿರವ ನಾಗೇಶ್.

ವೆಬ್ದುನಿಯಾವನ್ನು ಓದಿ