ರಮ್ಯಾ ಜಗಳವಾಡಿದವರ ಜತೆ ರಾಗಿಣಿ ಪ್ರೀತಿ: ಸಖತ್ ಟಾಂಗ್!

ಮಂಗಳವಾರ, 7 ಮೇ 2013 (19:29 IST)
PR
ಲಕ್ಕಿ ಸ್ಟಾರ್ ರಮ್ಯಾ ಮತ್ತು ಗ್ಲಾಮರ್ ಬೊಂಬೆ ರಾಗಿಣಿ ದ್ವಿವೇದಿ ಆಜನ್ಮ ವೈರಿಗಳಂತೆ ಪರೋಕ್ಷವಾಗಿ ಕಿತ್ತಾಡುತ್ತಿರುವುದು ಹೊಸತೇನಲ್ಲ. ಅವರಿಬ್ಬರು ಹಾವು-ಮುಂಗುಸಿಗಳ ಹಾಗೆ ಆಡುತ್ತಿದ್ದಾರೆ. ಒಬ್ಬರನ್ನು ನೋಡಿದರೆ ಇನ್ನೊಬ್ಬರಿಗೆ ಆಗಿ ಬರುವುದಿಲ್ಲ. ಹೀಗಿರುವಾಗ ರಾಗಿಣಿ ವಿವಾದಕ್ಕೆ ಒಂದಷ್ಟು ಸಮಯದ ನಂತರ ತುಪ್ಪ ಸುರಿದಿದ್ದಾರೆ!

ನಿಮಗೆ ನೆನಪಿರಬಹುದು, ಕೆಲ ದಿನಗಳ ಹಿಂದೆ ರಗಳೆ ರಮ್ಯಾ ಪೊಲೀಸರಿಗೆ ದೂರು ನೀಡಿದ್ದರು. ಅದು ತನ್ನ ಅನುಮತಿ ಇಲ್ಲದೆ 'ನೀರ್ ದೋಸೆ' ಚಿತ್ರದ 'ಅಶ್ಲೀಲ' ಫೋಟೊ ತೆಗೆದಿದ್ದಾರೆ ಮತ್ತು ಅದನ್ನು ಇಂಟರ್ನೆಟ್‌ನಲ್ಲಿ ಶೇರ್ ಮಾಡಿದ್ದಾರೆ ಎಂದು ಸಿನಿಮಾ ಛಾಯಾಗ್ರಾಹಕರ ವಿರುದ್ಧ ಕಿಡಿ ಕಾರಿದ್ದು. ಆ ಮೂಲಕ ಸಿನಿ ಛಾಯಾಗ್ರಾಹಕರನ್ನು ರಮ್ಯಾ ವಿನಾಕಾರಣ ಎದುರು ಹಾಕಿಕೊಂಡಿದ್ದರು. ಅಲ್ಲದೆ, ತಾನು ಮಾಡಿದ್ದೇ ಸರಿ ಎಂದು ಸಮರ್ಥನೆ ಕೂಡ ಮಾಡಿಕೊಂಡಿದ್ದರು.

PR
ಈ ವಿವಾದದ ಸಂದರ್ಭ ಸುಮ್ಮನಿದ್ದ ರಾಗಿಣಿ ತನ್ನ ಸರದಿ ಬರುತ್ತಿರುವಂತೆ ರಮ್ಯಾಗೆ ಸಖತ್ ಟಾಂಗ್ ಕೊಟ್ಟಿದ್ದಾರೆ. ಹಾಗೆಂದು ರಮ್ಯಾ ವಿರುದ್ಧ ಮಾತನಾಡಿದ್ದಾರೆ ಎಂದು ಭಾವಿಸಬೇಕಿಲ್ಲ. ರಾಗಿಣಿ ಮಾಡಿರುವುದು ಇಷ್ಟೇ, ರಮ್ಯಾ ರೇಗಾಡಿದ-ಕೂಗಾಡಿದ ಅದೇ ಫೋಟೋಗ್ರಾಫರುಗಳ ಜತೆ ನಿಂತು ಆತ್ಮೀಯವಾಗಿ ಫೋಟೊ ಕ್ಲಿಕ್ಕಿಸಿಕೊಂಡಿರುವುದು!

ಹಾಗೆ ತೆಗೆದ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಶೇರ್ ಕೂಡ ಮಾಡಿಕೊಂಡಿದ್ದಾರೆ. ಹಾಗೆ ಶೇರ್ ಮಾಡಿಕೊಂಡು ಅವರು ಬರೆದಿರುವ ಸಾಲುಗಳನ್ನು ಓದಿ.

Photographers of namma industry make us look good. They get me one step closer 2 u. The best photographers my friends of namma industry ... Exclusive pic taken n the sets of RAGINI IPS.

ರಾಗಿಣಿ ಐಪಿಎಸ್ ಚಿತ್ರದ ಶೂಟಿಂಗ್ ಮುಗಿಯುವ ಹಂತದಲ್ಲಿ ಹೀಗೆ ಫೋಟೊಗ್ರಾಫರುಗಳ ಜತೆ ಅತಿಯಾದ ಪ್ರೀತಿ ತೋರಿಸಿದ್ದಾರೆ ರಾಗಿಣಿ. ಕಲಾವಿದರು ಅತಿಯಾಗಿ ನಂಬುವ ಛಾಯಾಗ್ರಾಹಕರ ವಿರುದ್ಧವೇ ಕತ್ತಿ ಮಸೆದ ರಮ್ಯಾಗೆ ಈಗ ಚೇಳು ಕಡಿದ ಅನುಭವ ಆಗುತ್ತಿರಬಹುದು. ಅದನ್ನೇ ರಾಗಿಣಿ ಕೂಡ ನಿರೀಕ್ಷೆ ಮಾಡುತ್ತಿರಬಹುದು!

ವೆಬ್ದುನಿಯಾವನ್ನು ಓದಿ