ಅನ್ಯಾಯದ ವಿರುದ್ಧ ಭುಗಿಲೆದ್ದ ದಿಗ್ಗಜರ ಮಕ್ಕಳು

MOKSHENDRA
ನಟ ದಿಗ್ಗಜರ ಮಕ್ಕಳು ವಾಣಿಜ್ಯ ಮಂಡಳಿ ಬಗ್ಗೆ ಮುನಿಸಿಕೊಂಡಿದ್ದಾರೆ. ನಮ್ಮ ಅಪ್ಪಂದಿರಿಗೆ ಅನ್ಯಾಯವಾಗಿರುವುದೇ ಇವರ ಮುನಿಸಿಗೆ ಕಾರಣ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಮೃತ ಮಹೋತ್ಸವ ನೆನಪಿಗಾಗಿ 75 ಸಾಧಕರ ಕುರಿತು ಪುಸ್ತಕಗಳನ್ನು ಹೊರತಂದಿತ್ತು. ಆದರೆ, ಅದರಲ್ಲಿ ತೂಗುದೀಪ್ ಶ್ರೀನಿವಾಸ್, ಸುಧೀರ್, ಮುಸುರಿ ಕೃಷ್ಣಮೂರ್ತಿ, ದಿನೇಶ್, ಸುಂದರಕೃಷ್ಣ ಅರಸ್, ಮೈಸೂರು ಲೋಕೇಶ್ ಮತ್ತು ಎನ್ಎಸ‌್‌ರಾವ್ ಅವರ ಪುಸ್ತಕಗಳು ಮಾತ್ರ ಬಂದಿರಲಿಲ್ಲ. ಆಗಲೇ ಖಳನಾಯಕರಾಗಿ ನಟಿಸಿ ಖ್ಯಾತಿ ಪಡೆದವರನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಅಪಸ್ವರ ಎದ್ದಿತ್ತು. ಆದರೆ ಅದಕ್ಕೆ ಎಲ್ಲಿಂದಲೂ ಪ್ರತಿಕ್ರಿಯೆ ಬರಿದ್ದುದಕ್ಕೆ ಈಗ ಆ ಅಪಸ್ವರ ತಾರಕಕ್ಕೇರಿದೆ. ನಟದಿಗ್ಗಜರ ಮಕ್ಕಳೆಲ್ಲ ಒಂದಾಗಿದ್ದಾರೆ.

ಈಗ ಈ ಬಗ್ಗೆ ನಟ ದರ್ಶನ್ ತೂಗುದೀಪ್ ನೇತೃತ್ವದಲ್ಲಿ ನಾಗೇಂದ್ರ ಅರಸ್, ತರುಣ್ ಸುಧೀರ್, ಗಿರಿ ದಿನೇಶ್, ಜಯಸಿಂಹ ಮುಸುರಿ ಮತ್ತು ಆದಿ ಲೋಕೇಶ್ ಒಟ್ಟುಗೂಡಿ ಕನ್ನಡ ಜನತೆಯ ಮುಂದೆ ಹೋಗಲು ಯೋಚಿಸಿದ್ದಾರೆ. ಮೊದಲು ಈ ಬಗ್ಗೆ ಮಂಡಳಿಯ ಅಧ್ಯಕ್ಷೆ ಜಯಮಾಲಾ ಅವರಿಗೆ ಒಂದಲ್ಲ, ಎರಡಲ್ಲ ಮೂರು ಬಾರಿ ಮನವಿ ಮಾಡಿದ್ದರಂತೆ. ಆದರೆ ಇದುವರೆಗೆ ಸ್ಪಂದಿಸಿಲ್ಲ ಎಂಬುದು ಅವರ ಅಳಲು. "ನಾವೇನು ಕಿರುಚಾಟ ಮಾಡುತ್ತಿರಲಿಲ್ಲ. ಮುಂದಿನ ಕಂತಿನಲ್ಲಿ ಪುಸ್ತಕ ಬರೆಸುತ್ತೇವೆ ಎಂದೂ ಒಪ್ಪಿಕೊಳ್ಳುತ್ತಿರಲಿಲ್ಲ. ಆ ಮಾತು ಬೇರೆ ಕನಿಷ್ಠ ನಮ್ಮ ಅಳಲನ್ನು ಕೇಳುವ ಸೌಜನ್ಯ ತೋರಲಿಲ್ಲ. ಅಂದ ಮೇಲೆ ಮಂಡಳಿ ಇರುವುದಾದರೂ ಯಾಕೆ?" ಎಂದು ಪ್ರಶ್ನಿಸುತ್ತಾರೆ ನಿರ್ದೇಶಕ ನಾಗೇಂದ್ರ ಅರಸ್. ಇನ್ನಾದರೂ ಇವರ ಅಳಲಿಗೆ ಉತ್ತರ ದೊರೆಯುತ್ತದೋ ಏನೋ...

ವೆಬ್ದುನಿಯಾವನ್ನು ಓದಿ