ಇನ್ನೇನು 60 ದಿನ, ಬಂದೇ ಬಿಡ್ತೀವಿ: ಬಾಂಡ್ ಟೀಮ್

SUJENDRA
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ - ದುನಿಯಾ ಸೂರಿ ಕಾಂಬಿನೇಷನ್‌ನ ಎರಡನೇ ಚಿತ್ರ 'ಅಣ್ಣಾ ಬಾಂಡ್' ಕ್ರೇಜ್ ದಿನದಿಂದ ದಿನಕ್ಕೆ ಜೋರಾಗುತ್ತಿದೆ. 'ಜಾಕಿ'ಯನ್ನು ನೋಡಿದವರಂತೂ 'ಅಣ್ಣಾ ಬಾಂಡ್' ಜಪವನ್ನೇ ಮಾಡುತ್ತಿದ್ದಾರೆ. ಅವರೆಲ್ಲರಿಗೆ ಬಾಂಡ್ ಟೀಮ್ ಕೊಟ್ಟಿರೋ ಮೆಸೇಜ್, ಸ್ವಲ್ಪ ಕಾಯಿರಿ, ನಾವು ಬರ್ತಾ ಇದ್ದೀವಿ!

ಹೌದು, ಇನ್ನೇನು ಅರವತ್ತೇ ದಿನದಲ್ಲಿ ನಾವು ಬಂದು ಬಿಡ್ತೀವಿ. ಡಬ್ಬಿಂಗ್ ನಡೀತಿದೆ. ಹಾಡುಗಳ ಚಿತ್ರೀಕರಣ ಇನ್ನೇನು ನಡೆಯಲಿದೆ. ನೀವೆಲ್ಲ ಎಷ್ಟು ಕಾತುರದಿಂದ ಕಾಯ್ತಿದ್ದೀರೋ, ನಮ್ಗೂ ಮೂವಿ ನಿಮಗೆ ತೋರಿಸೋದಿಕ್ಕೆ ಅಷ್ಟೇ ಕಾತುರ ಇದೆ! ಇನ್ನೇನು 60 ದಿನ, ಅಷ್ಟೇ! ಎಂದು 'ಅಣ್ಣಾ ಬಾಂಡ್' ಸಂದೇಶ ಫೇಸ್‌ಬುಕ್‌ನಲ್ಲಿ ಬಂದಿದೆ.

ಅಭಿಮಾನಿಗಳಂತೂ, ಇನ್ನೂ ಎರಡು ತಿಂಗಳು ಕಾಯಬೇಕಾ ಅಂತೆಲ್ಲ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಸಿನಿಮಾ ಹೇಗೂ ಲೇಟಾಗುತ್ತೆ, ಆಡಿಯೋನಾದ್ರೂ ರಿಲೀಸ್ ಮಾಡಿ ಅಂತ ಕೆಲವ್ರು ಒತ್ತಾಯ ಮಾಡ್ತಿದ್ರೆ, ಇನ್ನು ಕೆಲವ್ರು ಲೇಟಾದ್ರೂ ಪರ್ವಾಗಿಲ್ಲ, ಚೆನ್ನಾಗಿ ಮಾಡಿ, ಟೀಕಿಸೋರಿಗೆ ಸರಿಯಾದ ಉತ್ತರ ಕೊಡಿ ಅಂತಿದ್ದಾರೆ.

ಬಾಂಡ್ ಟೀಮ್ ಹೇಳ್ತಿರೋ ಪ್ರಕಾರ, ಚಿತ್ರ ಏಪ್ರಿಲ್ 26ಕ್ಕೆ ಬಿಡುಗಡೆಯಾಗುತ್ತೆ. ಆದರೆ ಆ ದಿನವನ್ನೇ ಖಚಿತವಾಗಿ ಹೇಳಿಲ್ಲ. ಏಪ್ರಿಲ್ 24ರಂದು ವರನಟ ಡಾ. ರಾಜ್‌ಕುಮಾರ್ ಅವರ ಹುಟ್ಟುಹಬ್ಬ. ಅದಾದ ಎರಡು ದಿನದಲ್ಲಿ ಚಿತ್ರವನ್ನು ತೆರೆಗೆ ತರುವ ಯೋಚನೆ ಚಿತ್ರತಂಡದ್ದು ಎಂದು ಹೇಳಲಾಗುತ್ತಿದೆ.

ಈ ಹಿಂದೆ ಏಪ್ರಿಲ್ 19 ಅಥವಾ 26ಕ್ಕೆ ಚಿತ್ರ ತೆರೆಗೆ ಬರಬಹುದು ಎಂದು ಹೇಳಲಾಗಿತ್ತು.

ಬಾಂಡ್‌ನಲ್ಲಿ ಪುನೀತ್‌ಗೆ ಪ್ರಿಯಾಮಣಿ ಮತ್ತು ನಿಧಿ ಸುಬ್ಬಯ್ಯ ಇಬ್ಬರು ನಾಯಕಿಯರು. ಇಬ್ಬರ ಪಾತ್ರವೂ ಮಹತ್ವದ್ದು. ಉಳಿದಂತೆ ಜಾಕಿ ಶ್ರಾಫ್, ರಂಗಾಯಣ ರಘು, ಜಾನ್ ಕೊಕೈನ್ ಮುಂತಾದವರೂ ಇದ್ದಾರೆ. ಸಂಗೀತ ಹರಿಕೃಷ್ಣ ಅವರದ್ದು.

ಅಂದ ಹಾಗೆ, ಬಾಂಡ್ ಟೀಮ್ ಇತ್ತೀಚೆಗಷ್ಟೇ ನಡೆದ ಕ್ಲೈಮ್ಯಾಕ್ಸ್ ಶೂಟಿಂಗ್‌ನ ಫೋಟೋಗಳನ್ನೂ ಬಿಡುಗಡೆ ಮಾಡಿದೆ. ಬಾಂಡ್ ಮೇಕಿಂಗ್ ದೃಶ್ಯಗಳನ್ನು ನೋಡಿ, ಕಣ್ತುಂಬಿಸಿಕೊಳ್ಳಿ.

ವೆಬ್ದುನಿಯಾವನ್ನು ಓದಿ