ಉಪ್ಪಿ 'ಬ್ರಹ್ಮ'ನಿಗೆ ಕೊನೆಗೂ ಗಂಟು ಬಿದ್ರು ಪ್ರಣೀತಾ ಸುಭಾಷ್!

ಮಂಗಳವಾರ, 14 ಮೇ 2013 (14:17 IST)
PR
ರಿಯಲ್ ಸ್ಟಾರ್ ಉಪೇಂದ್ರರ ಚಿತ್ರಕ್ಕೆ ನಾಯಕಿಯರೇ ಸಿಗುತ್ತಿಲ್ಲ ಎಂದರೆ ನಂಬುವ ಮಾತೇ? ಅದರಲ್ಲೂ 'ಚಾರ್‌ಮಿನಾರ್' ನಂತರ ನಿರ್ದೇಶಕ ಆರ್. ಚಂದ್ರು ತನಗೇನಾದರೂ ಫೋನ್ ಮಾಡಬಹುದೇ ಎಂದು ಅದೆಷ್ಟು ನಾಯಕಿಯರು ಕನ್ನಡದಲ್ಲೇ ಕಾಯುತ್ತಿರಲಿಲ್ಲ? ಉಹೂಂ, ಆದರೂ ಚಂದ್ರು ಚಿತ್ರಕ್ಕೆ ಹೀರೋಯಿನ್ ಸಿಕ್ಕಿರಲಿಲ್ಲ!

ಆ ಸಮಸ್ಯೆಗೆ ಕೊನೆಗೂ ಪರಿಹಾರ ಸಿಕ್ಕಿದೆ. ಅವರಿವರು ಆಗೋದಿಲ್ಲ ಎಂದು ಹೇಳಿದ ಮೇಲೆ ಕನ್ನಡತಿ ಪ್ರಣೀತಾ ಸುಭಾಷ್‌ಗೆ ಜೈ ಎಂದಿದ್ದಾರೆ ಡೈರೆಕ್ಟರ್ ಚಂದ್ರು.

ಮಂಜುನಾಥ್ ಬಾಬು ನಿರ್ಮಾಣದ 'ಬ್ರಹ್ಮ: ದಿ ಲೀಡರ್' ಚಿತ್ರದ ಸುದ್ದಿಯಿದು. ಈ ಚಿತ್ರದಲ್ಲಿ ಉಪೇಂದ್ರ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ನಾಯಕಿಯಾಗಲು ತ್ರಿಶಾ, ದೀಪಾ ಸನ್ನಿಧಿ ಮುಂತಾದವರಿಗೆ ನಿರ್ದೇಶಕ ಚಂದ್ರು ಗಾಳ ಹಾಕಿದ್ದರು. ಆದರೆ ಯಾರೂ ಸಿಗಲಿಲ್ಲ. ಕೊನೆಗೆ ಪ್ರಣೀತಾ ಸಿಕ್ಕಿದ್ದು, ಚಿತ್ರಕ್ಕೆ ಮುಹೂರ್ತವೂ ನಿಗದಿಯಾಗಿದೆ.

ಇನ್ನು ಪ್ರಣೀತಾರನ್ನೇ ಚಂದ್ರು ನಾಯಕಿಯನ್ನಾಗಿ ಆಯ್ಕೆ ಮಾಡಲು ಕಾರಣವಿದೆ. 'ಬ್ರಹ್ಮ' ಚಿತ್ರ ತೆಲುಗಿನಲ್ಲೂ ನಿರ್ಮಾಣವಾಗುತ್ತಿರುವುದರಿಂದ, ತೆಲುಗಿಗೆ ಈಗಾಗಲೇ ಪರಿಚಿತ ಮುಖವಾಗಿರುವ ಪ್ರಣೀತಾರನ್ನು ನಾಯಕಿಯನ್ನಾಗಿ ಮಾಡಿದರೆ ಲಾಭವಾಗಬಹುದು ಎನ್ನುವುದು ಲೆಕ್ಕಾಚಾರ. ಮೇಲಾಗಿ ಚಂದ್ರು ಕನ್ನಡದ ಹುಡುಗಿಯರಿಗೇ ಮಣೆ ಹಾಕುತ್ತಿರುವುದು ಕೂಡ ಕೆಲಸ ಮಾಡಿದೆಯಂತೆ.

16ನೇ ಶತಮಾನ ಮತ್ತು ಈಗಿನ ಕಾಲಘಟಕ್ಕೆ ಸಂಬಂಧಿಸಿದ ಕಥೆಯನ್ನು ಹೊಂದಿರುವ 'ಬ್ರಹ್ಮ' ಪಕ್ಕಾ ಆಕ್ಷನ್ ಚಿತ್ರ. ಈ ಹಿಂದೆ ಯಾವ ಚಿತ್ರದಲ್ಲೂ ಉಪ್ಪಿ ಮಾಡದಷ್ಟು ಆಕ್ಷನ್ ಭಾಗಗಳು ಇಲ್ಲಿವೆ. ಅದರಲ್ಲೂ ರಾಜರ ಕಾಲದ ಪೋಷಾಕಿನಲ್ಲಿ ಅವರು ರಣರಂಗದಲ್ಲಿ ಕಾದಾಡಲಿದ್ದಾರೆ. ಇಂತಹ ಕೆಲವು ಸನ್ನಿವೇಶಗಳು ಚಿತ್ರದ ಮುಹೂರ್ತದಂದೂ ದರ್ಶನವಾಗಲಿದೆ. ಅಂದು 40ಕ್ಕೂ ಹೆಚ್ಚು ಕುದುರೆಗಳು, ಸೈನಿಕರು ಸೆಟ್‌ನಲ್ಲಿರುತ್ತಾರಂತೆ.

ಮೇ 16ರಂದೇ 'ಬ್ರಹ್ಮ'ನಿಗೆ ಮುಹೂರ್ತ. ಬೆಂಗಳೂರು ಅರಮನೆ ಮೈದಾನದಲ್ಲಿ ಈ ಸಂಬಂಧ ಅದ್ದೂರಿ ಸಮಾರಂಭ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಚಿತ್ರರಂಗದ ಘಟಾನುಘಟಿಗಳು ಭಾಗವಹಿಸುವ ನಿರೀಕ್ಷೆಗಳಿವೆ. ಮೇ 17ರಂದು ಚಂದ್ರು 'ಚಾರ್‌ಮಿನಾರ್' 100ನೇ ದಿನ ಪೂರೈಸುತ್ತಿದೆ. 2013ರಲ್ಲಿ 100 ದಿನ ಪೂರೈಸಿದ ಮೊದಲ ಚಿತ್ರವಾಗಿರುವುದರಿಂದ ಚಂದ್ರು ಪಾಳಯದಲ್ಲಿ ಸಂಭ್ರಮಕ್ಕೆ ಕಾರಣಗಳಿವೆ.

ವೆಬ್ದುನಿಯಾವನ್ನು ಓದಿ