'ಎಂದಿರನ್' ನನ್ನ ಚಿತ್ರದ ರಿಮೇಕ್ ಅಲ್ಲ: ಉಪೇಂದ್ರ ಸ್ಪಷ್ಟನೆ

PR
ತನ್ನ ಬಹುನಿರೀಕ್ಷಿತ ಚಿತ್ರ 'ಸೂಪರ್' ಬಗ್ಗೆ ಮಾತನಾಡಲು ನಿರಾಕರಿಸುವ ಉಪೇಂದ್ರ ರಜನಿಕಾಂತ್ ಅಭಿನಯದ 'ಎಂದಿರನ್' ಕುರಿತು ಬಾಯ್ಬಿಟ್ಟಿದ್ದಾರೆ. ಈ ಚಿತ್ರ ದಿನೇಶ್ ಬಾಬು ನಿರ್ದೇಶನದ 'ಹಾಲಿವುಡ್' ಕನ್ನಡ ಚಿತ್ರದ ರಿಮೇಕ್ ಎಂದು ವದಂತಿಗಳು ಹರಡಿರುವುದನ್ನು ಉಪ್ಪಿ ತಳ್ಳಿ ಹಾಕಿದ್ದಾರೆ.

ನಾನು ಕಥೆ ಬರೆದಿದ್ದ 'ಹಾಲಿವುಡ್' ಚಿತ್ರದ ರಿಮೇಕ್ ತಮಿಳಿನಲ್ಲಿ ಆಗುತ್ತಿದೆ ಎಂಬ ಗಾಳಿಸುದ್ದಿಗಳಿದ್ದ ಹೊರತಾಗಿಯೂ ನಾನು ಎಂದಿರನ್ ಬಗ್ಗೆ ಯಾವುದೇ ಹೇಳಿಕೆ ನೀಡಲು ಹೋಗಿಲ್ಲ. ಕೋಟಿ ರಾಮು ನಿರ್ಮಾಣದ ಆ ಚಿತ್ರವನ್ನು ದಿನೇಶ್ ಬಾಬು ನಿರ್ದೇಶಿಸಿದ್ದರು ಎಂದು ಉಪ್ಪಿ ವಿವರಿಸಿದರು.

ಅಲ್ಲದೆ, ತಾನು ಹಾಲಿವುಡ್ ಚಿತ್ರದ ಕಥೆ ಬರೆಯುವುದಕ್ಕೂ ಮೊದಲು ಎಂದಿರನ್ ನಿರ್ದೇಶಕ ಶಂಕರ್ ಜತೆ ಸಮಾಲೋಚನೆ ನಡೆಸಿದ್ದೆ. ನನ್ನ ಕಥೆ ಮತ್ತು ಚಿತ್ರಕಥೆಯ ಕುರಿತು ಅವರ ಜತೆ ಚರ್ಚೆ ನಡೆಸಿದ್ದೆ ಎಂದರು.

ಎರಡೂ ಚಿತ್ರಗಳ ಕಥೆ ಒಂದೇ ಕಲ್ಪನೆಯನ್ನು ಹೊಂದಿದೆ ಎಂಬುದನ್ನು ಶಂಕರ್ ಒಪ್ಪಿಕೊಂಡಿದ್ದರು. ಆದರೆ ಅವರದ್ದು ಲೇಟೆಸ್ಟ್ ತಂತ್ರಜ್ಞಾನ ಮತ್ತು ಗ್ರಾಫಿಕ್ಸ್‌ಗಳನ್ನು ಬಳಸಿಕೊಂಡು ತಯಾರಾಗಲಿರುವ ಬಿಗ್ ಬಜೆಟ್ ಸಿನಿಮಾವಾಗಿತ್ತು. ಕನ್ನಡ ಚಿತ್ರರಂಗದಲ್ಲಿ ಅಂತಹ ಚಿತ್ರವನ್ನು ಮಾಡುವುದು ಸಾಧ್ಯವಿರಲಿಲ್ಲ. ಹಾಗಾಗಿ ಈ ವಿಚಾರದಲ್ಲಿ ನಮ್ಮಲ್ಲಿ ಯಾವುದೇ ಗೊಂದಲ ಇರಲಿಲ್ಲ ಎಂದು ಉಪೇಂದ್ರ ತಿಳಿಸಿದ್ದಾರೆ.

ಇದೇ ಕಾರಣದಿಂದ ನಾನು ಪ್ರೇಕ್ಷಕರನ್ನು ರಂಜಿಸಬೇಕು, ಮನರಂಜನೆಗೆ ಸಾಕಷ್ಟು ಸರಕು ಇರಬೇಕೆಂಬುದನ್ನು ಗಮನದಲ್ಲಿಟ್ಟುಕೊಂಡೇ ಚಿತ್ರಕಥೆ ಬರೆದಿದ್ದೆ. ಜತೆಗೆ ಕೆಲವೊಂದು ತಂತ್ರಜ್ಞಾನಗಳನ್ನು ಕೂಡ ಬಳಸಲಾಗಿತ್ತು. ಆದರೆ ಶಂಕರ್ ಅವರದ್ದು ಭಿನ್ನ ನಿರೂಪನೆ. ಎಂದಿರನ್ ಇತ್ತೀಚೆಗಷ್ಟೇ ನೋಡಿದೆ, ಅತ್ಯುತ್ತಮವಾಗಿದೆ ಎಂದರು.

'ಹಾಲಿವುಡ್' ನನ್ನ ಸ್ವಂತ ಚಿತ್ರವಿದ್ದ ಹಾಗೆ 'ಎಂದಿರನ್' ಶಂಕರ್ ಅವರದ್ದೇ ಕಲ್ಪನೆಯ ಚಿತ್ರ ಎಂದು ನಾನು ಒತ್ತಿ ಹೇಳುತ್ತಿದ್ದೇನೆ. ರಜನಿಕಾಂತ್ ಅವರಂತಹ ದೊಡ್ಡ ನಟನನ್ನು ಹಾಕಿಕೊಂಡು ಇಂತಹ ಚಿತ್ರವನ್ನು ನಿರ್ಮಿಸಿರುವ ಶಂಕರ್ ಶೈಲಿ ನನಗೆ ಖುಷಿ ತಂದಿದೆ. ಶ್ರೇಷ್ಠ ತಂತ್ರಜ್ಞಾನವನ್ನು ಚಿತ್ರದಲ್ಲಿ ಬಳಸಲಾಗಿರುವುದು ಧನಾತ್ಮಕ ಅಂಶ ಎಂದು ಉಪೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದರು.

ರೊಬೊಟ್ ಪ್ರಮುಖ ಪಾತ್ರವಾಗಿರುವುದು, ರೊಬೊಟ್ ನಾಯಕನ ತದ್ರೂಪಿಯಾಗಿರುವುದು ಮತ್ತು ನಾಯಕನ ಪ್ರೇಯಸಿಯನ್ನು ರೊಬೊಟ್ ಪ್ರೀತಿಸುವುದು ಮುಂತಾದ ಸಮಾನ ವಿಚಾರಗಳು ಎರಡೂ ಚಿತ್ರಗಳಲ್ಲಿವೆ.

ಇಲ್ಲಿ ಮತ್ತೊಂದು ಅಚ್ಚರಿಯ ವಿಚಾರವೆಂದರೆ 'ಎಂದಿರನ್' ಚಿತ್ರವನ್ನು ಶಂಕರ್ ನಿರ್ಮಿಸಲು ಹೊರಟದ್ದು 2001ರಲ್ಲಿ. ಆದರೆ ನಾಯಕರು ಸಿಗದ ಕಾರಣ ಇದುವರೆಗೆ ಯೋಜನೆ ಮುಂದೂಡಲ್ಪಟ್ಟಿತ್ತು. ಉಪ್ಪಿಯ 'ಹಾಲಿವುಡ್' 2002ರಲ್ಲಿ ಬಿಡುಗಡೆಯಾಗಿತ್ತು.

ವೆಬ್ದುನಿಯಾವನ್ನು ಓದಿ