ಎಚ್‌ಡಿಕೆ ಡೋಂಟ್ ಕೇರ್; 'ರಾಧಿಕನ್ ಗಂಡ' ಕಂಪ್ಲೀಟ್

PR
ನಿಮ್ಮ ಸಿನಿಮಾಕ್ಕೆ ನೀವು ನನ್ನ ಹೆಸರನ್ನು ಇಟ್ಟಿದ್ದೀರಿ. ಅದನ್ನು ಬದಲಾಯಿಸಿ. ಇಲ್ಲದಿದ್ದರೆ ಪರಿಸ್ಥಿತಿ ನೆಟ್ಟಗಿರೋದಿಲ್ಲ ಅಂತ ರಾಧಿಕಾ ಕುಮಾರಸ್ವಾಮಿ ಬೆದರಿಕೆ ಹಾಕಿದ್ದನ್ನು 'ರಾಧಿಕನ್ ಗಂಡ' ಟೀಮ್ ಕ್ಯಾರೇ ಅಂದಿಲ್ಲ. ನೀವೊಬ್ರೇನಾ ರಾಧಿಕಾ ಇರೋದು ಅಂತ ಈಗ ಚಿತ್ರೀಕರಣವನ್ನು ಮುಗಿಸಿ, ಇತರ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ.

'ರಾಧಿಕನ್ ಗಂಡ' ಶೀರ್ಷಿಕೆಯಲ್ಲಿ ರಾಧಿಕಾ ಎಂಬ ಹೆಸರು ಇರುವುದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇಲ್ಲಿ ರಾಧಿಕನ್ ಗಂಡ ಎಂದರೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಎಂಬ ಅರ್ಥವಿದೆ ಎಂಬ ಗುಲ್ಲೆದ್ದಿತ್ತು. ಇದರ ನಾಯಕ ಕೋಮಲ್ ಕುಮಾರ್‌ಗೆ ಫೋನ್ ಮಾಡಿದ್ದ ರಾಧಿಕಾ, ಈ ಹೆಸರನ್ನು ಬದಲಾಯಿಸುವಂತೆ ಒತ್ತಾಯಿಸಿದ್ದರು. ಇದು ನಿಮ್ಮ ಹೆಸರಲ್ಲ ಮೇಡಂ, ಬೇರೆ ಯಾರೋ ರಾಧಿಕಾ ಅಂದರೂ ಸುಮ್ಮನಾಗಿರಲಿಲ್ಲ.

ಆದರೆ ರಾಧಿಕನ್ ಗಂಡ ಚಿತ್ರತಂಡ ಯಾವುದೇ ಆಕ್ಷೇಪಣೆಗಳಿಗೆ ಸೊಪ್ಪು ಹಾಕಿಲ್ಲ. ಕುಮಾರಸ್ವಾಮಿ ಮತ್ತು ರಾಧಿಕಾ ಸಂಬಂಧವೀಗ ಜಗಜ್ಜಾಹೀರು. ನಾವು ಈ ಶೀರ್ಷಿಕೆ ಇಟ್ಟಿರೋದು ಪ್ರೇಕ್ಷಕರನ್ನು ಸೆಳೆಯಬೇಕೆಂಬ ಉದ್ದೇಶದಿಂದ. ಅದರಲ್ಲೇನಿದೆ ತಪ್ಪು? ಅಷ್ಟಕ್ಕೂ ರಾಧಿಕಾ ಎಂಬ ಹೆಸರಿನವರು ಕರ್ನಾಟಕದಲ್ಲಿ ಅದೆಷ್ಟು ಮಂದಿಯಿಲ್ಲ? ನಾವೇನೂ ಇದಕ್ಕೆ ತಲೆ ಕೆಡಿಸಿಕೊಂಡಿಲ್ಲ ಅಂತಿದೆ.

ಇದೇ ಜೋಶ್‌ನಲ್ಲಿ ಶೂಟಿಂಗ್ ಮುಗಿಸಿರುವ ಕೋಮಲ್ ಕುಮಾರ್ ಎಂಡ್ ಟೀಮ್, ಈಗ ಕರಿ ಸುಬ್ಬು ಅವರ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಡಬ್ಬಿಂಗ್ ಮಾಡುತ್ತಿದೆ. ಇನ್ನೇನು ಕೆಲವೇ ಸಮಯದಲ್ಲಿ ಸಿನಿಮಾ ರೆಡಿ.

ಶಾಂತಾ ಪಿಕ್ಚರ್ಸ್ ಮತ್ತು ಕಾನ್ಫಿಡೆಂಟ್ ಗ್ರೂಪ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಕಥೆ, ಚಿತ್ರಕಥೆಯೊಂದಿಗೆ ನಿರ್ದೇಶಿಸುತ್ತಿರುವುದು ಮುರುಗನ್. ಮಣಿಕಾಂತ್ ಕದ್ರಿ ಸಂಗೀತದಲ್ಲಿ ಐದು ಹಾಡುಗಳಿವೆ. ಕೋಮಲ್‌ಗೆ ಪೂರ್ಣ ಎಂಬಾಕೆ ಜೋಡಿಯಾಗಿದ್ದಾರೆ. ಆರ್ಯ, ಪೂರ್ಣ ಕುಮಾರ್, ಸುದರ್ಶನ್, ಕುರಿಗಳು ಪ್ರತಾಪ್ ಮುಂತಾದವರೂ ಚಿತ್ರದಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ