ಒಂದು ತಿಂಗಳು ನಟಿಸದಿರಲು ಸುದೀಪ್‌ಗೆ ನಿರ್ಬಂಧ!

PR
ವಿಶ್ವ ಕನ್ನಡ ಸಮ್ಮೇಳನಕ್ಕೆ ಹಾಜರಾಗದ ಕಾರಣ ಒಂದು ತಿಂಗಳವರೆಗೆ ಚಿತ್ರದಲ್ಲಿ ನಟಿಸಬಾರದು ಎಂದು ಕನ್ನಡ ಚಿತ್ರರಂಗ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಆದೇಶಿಸಿದೆ ಎಂದು ಸುದೀಪ್ ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ಸರಿಸುಮಾರು ಎಲ್ಲ ನಟ-ನಟಿಯರು ಬೆಳಗಾವಿಯಲ್ಲಿ ಅದ್ದೂರಿಯಾಗಿ ನಡೆಯುತ್ತಿರುವ ವಿಶ್ವ ಕನ್ನಡ ಸಮ್ಮೇಳನಕ್ಕೆ ಭಾಗವಹಿಸಲು ದಂಡು-ದಂಡಾಗಿ ಹೋಗಿದ್ದಾರೆ. ನಟ ಸೂಪರ್ ಸ್ಟಾರ್ ಉಪೇಂದ್ರ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಹಲವು ನಟರು ಕರ್ನಾಟಕ ಐತಿಹಾಸಿಕ ನಾಯಕರ ಕಥಾಹಂದರವನ್ನು ಒಳಗೊಂಡ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ಸಮ್ಮೇಳನಕ್ಕೆ ಮೆರುಗು ನೀಡಿದ್ದರು.

ಹಲವು ರಾಜಕೀಯ ಗಣ್ಯರು, ಕಲಾವಿದರು, ಕವಿಗಳು, ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ಸೇರಿದಂತೆ ನೆರೆರಾಜ್ಯದಿಂದ ನಟಿ ಐಶ್ವರ್ಯ ರೈ ಕೂಡ ಆಗಮಿಸಿ ಸಮಾರಂಭವನ್ನು ಇನ್ನಷ್ಟು ಅಂದಗಾಣಿಸಿದ್ದರು.

ಆದರೆ ಈ ಸಮಯದಲ್ಲಿ ಸುದೀಪ್ ತನ್ನ ಪತ್ನಿಯೊಂದಿಗೆ ಬೆಂಗಳೂರಿನ ಸಂತೋಷ್ ಚಿತ್ರಮಂದಿರಕ್ಕೆ ತನ್ನ 'ಕೆಂಪೇಗೌಡ' ಚಿತ್ರ ವೀಕ್ಷಿಸಲು ಹೋಗಿದ್ದರು. ತಮ್ಮ ಚಿತ್ರಕ್ಕೆ ಬೆಂಬಲಿಸುತ್ತಿರುವ ಅಭಿಮಾನಿಗಳಿಗೆ ಪೇಸ್‌ಬುಕ್‌ನಲ್ಲಿ ಕೃತಜ್ಞತೆಯನ್ನೂ ಸಲ್ಲಿಸಿದ್ದರು.

ಈ ಕಾರಣದಿಂದ, ವಿಶ್ವ ಕನ್ನಡ ಸಮ್ಮೇಳನಕ್ಕೆ ಸುದೀಪ್ ಗೈರು ಹಾಜರಾಗಲು ಅಂಥಹ ಬಲವಾದ ಕಾರಣಗಳೇನಿರಲಿಲ್ಲ ಎಂದು ಕೆಲವೆಡೆ ಚರ್ಚೆಗೆ ಒಳಗಾಯಿತಾದರೂ, ಐಶ್ವರ್ಯ ರೈ ಆಗಮನ ಮತ್ತು ಜಪಾನ್‌ನಲ್ಲಿ ಸಂಭವಿಸಿದ ಭೀಕರ ಸುನಾಮಿ, ಭೂಕಂಪದಿಂದಾಗಿ ಸುದೀಪ್ ಸೇರಿದಂತೆ ಹಲವಾರು ಗಣ್ಯರ ಗೈರುಹಾಜರಿ ಚರ್ಚೆಗೆ ಬಂದಿರಲಿಲ್ಲ.

ಆದರೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದಂತಿರುವ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಒಂದು ತಿಂಗಳವರೆಗೆ ಯಾವುದೇ ಚಿತ್ರಗಳಲ್ಲಿ ನಟಿಸದಿರಲು ಆದೇಶಿಸಿದೆ.

ಈ ಕ್ರಮಕ್ಕೆ ಪ್ರತಿಕ್ರಿಯಿಸಿರುವ ಸುದೀಪ್, 'ಇಷ್ಟುದಿನ ನನ್ನ ಭಾಷೆಗಾಗಿ ಮಾಡಿದೆಲ್ಲ ಒಂದು ದಿನದ ಅನುಪಸ್ಥಿತಿ ಮರೆಸಿಬಿಟ್ಟಿದೆ' ಎಂದು ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ.

ಆದರೆ ಇದೀಗ ಬಂದ ಮಾಹಿತಿಯಂತೆ....

ಸುದೀಪ್ ಅವರು ವಿಶ್ವ ಕನ್ನಡ ಸಮ್ಮೇಳನಕ್ಕೆ ಭಾಗವಹಿಸಲು ಈಗಾಗಲೇ ಬೆಳಗಾವಿಗೆ ಹೊರಟಿದ್ದು, ಈಗ ದಾವಣಗೆರೆ ತಲುಪಿದ್ದಾರೆ ಎಂದು ತನ್ನ ಆಪ್ತರಿಗೆ ಮಾಹಿತಿ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೊಂದೆಡೆ 'ಇಂತಹ ಯಾವುದೇ ನಿರ್ಧಾರವನ್ನು ಕೆಎಫ್‌ಸಿಸಿ ತೆಗೆದುಕೊಂಡಿಲ್ಲ, ಇಂತಹ ಊಹಾಪೋಹಗಳಿಗೆ ಸುದೀಪ್ ತಲೆಕೆಡಿಸಿಕೊಳ್ಳಬೇಕಾಗಿರಲಿಲ್ಲ' ಎಂದು ಚಲನ ಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಎ. ಗಣೇಶ್ ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

'ಸುದೀಪ್ ಅವರು ಕೆಎಫ್‌ಸಿಸಿಯನ್ನು ಸಂಪರ್ಕಿಸಿ ವಿಷಯ ಖಚಿತಪಡಿಸಿಕೊಳ್ಳುವುದು ಒಳಿತು' ಎಂದು ರಾಕ್‌ಲೈನ್ ವೆಂಕಟೇಶ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ