ಓಂಕಾರ ಪ್ರೀತಿಗೆ ಟೋನಿ ಏಕ್ ದಿನ್ ಕಾ ಸುಲ್ತಾನ್

PR
'ಓಂಕಾರ'ದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿ ಸದ್ದೇ ಮಾಡದೆ ಮಾಯವಾಗಿದ್ದ ಪ್ರೀತಿ ಜಂಗಿಯಾನಿಗೆ ಜಯತೀರ್ಥ ಗಾಳ ಹಾಕಿದ್ದಾರೆ. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಆದರೆ ಆಕೆ 'ಟೋನಿ'ಯ ನಾಯಕಿಯಲ್ಲ, ಬದಲಿಗೆ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಯಾಕೋ ಗೊತ್ತಿಲ್ಲ, 'ಒಲವೇ ಮಂದಾರ'ದಲ್ಲಿ ಜನಪ್ರಿಯ ಸೂತ್ರಗಳಿಗೆ ಬೆನ್ನು ಹಾಕಿದ್ದ ರಂಗಭೂಮಿಯ ಚತುರ ಜಯತೀರ್ಥ ಈ ಬಾರಿ ಉಲ್ಟಾ ಹೊಡೆಯುತ್ತಿದ್ದಾರೆ. ಶ್ರೀನಗರ ಕಿಟ್ಟಿ ನಾಯಕ, ಐಂದ್ರಿತಾ ರೇ ನಾಯಕಿಯನ್ನು ಆರಿಸುವುದರ ಜತೆಗೆ ನಾಯಕನಿಗೆ ರಫ್ ಎಂಡ್ ಟಫ್ ಗೆಟಪ್ ಕೊಟ್ಟಿದ್ದಾರೆ. ಬಾಯಿಗೆ ದಪ್ಪನೆಯ ಸಿಗಾರ್ ಇರಿಸಿದ್ದಾರೆ. ಪ್ರೀತಿಗಿಂತ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಆರಿಸಿಕೊಂಡಿದ್ದಾರೆ.

ಈಗ ಬೇಡಿಕೆಯೇ ಇಲ್ಲದ ಬಾಲಿವುಡ್ ನಟಿಯೊಬ್ಬಳನ್ನು ಮತ್ತೆ ಕನ್ನಡಕ್ಕೆ ಕರೆ ತರುವ ಸರದಿ. ಅದೂ ವಿವಾಹಿತೆಯನ್ನು!

ಇಂದ್ರಕುಮಾರ್ ಮತ್ತು ಶ್ರೀನಗರ ಕಿಟ್ಟಿ ನಿರ್ಮಿಸುತ್ತಿರುವ 'ಟೋನಿ - ಏಕ್ ದಿನ್ ಕಾ ಸುಲ್ತಾನ್' ಚಿತ್ರದ ಚಿತ್ರೀಕರಣ ಇನ್ನಷ್ಟೇ ಶುರುವಾಗಬೇಕಿದೆ.

ಮೂಲತಃ ಮಂಗಳೂರು ಹುಡುಗಿಯಾಗಿರುವ ಪ್ರೀತಿ ಜಂಗಿಯಾನಿ ಕಳೆದ ನಾಲ್ಕೈದು ವರ್ಷಗಳಿಂದ ಹೆಚ್ಚು ಕಡಿಮೆ ನಿರುದ್ಯೋಗಿ. ಆಕೆ ಅದನ್ನು ಗೃಹಿಣಿ ಎಂದು ಕರೆದುಕೊಳ್ಳುತ್ತಿದ್ದಾರೆ. ಹಾಗೆಂದು ಚಿತ್ರರಂಗವನ್ನು ಪೂರ್ತಿ ಬಿಟ್ಟವರಲ್ಲ, ಆಗೊಮ್ಮೆ ಈಗೊಮ್ಮೆ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡು ಮಾಯವಾಗುತ್ತಾರೆ.

ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿದ್ದ ಶಿವಮಣಿ ನಿರ್ದೇಶನದ 'ಓಂಕಾರ' (2004) ಚಿತ್ರದ ನಂತರ ಕನ್ನಡದ ಕಡೆ ತಲೆ ಹಾಕಿಲ್ಲ. ಆಫರುಗಳು ಬಂದಿಲ್ಲವೆಂದಲ್ಲ. ಬೇರೆ ಚಿತ್ರಗಳಲ್ಲಿ ಬ್ಯುಸಿಯಾಗಿದ್ದುದರಿಂದ ಒಪ್ಪಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗೆ ತನ್ನ ಕನ್ನಡದ ಮರು ಎಂಟ್ರಿಯ ಬಗ್ಗೆ ಮಾತಿಗಿಳಿದರು ಪ್ರೀತಿ.

ಟೋನಿ ಚಿತ್ರದಲ್ಲಿ ನನ್ನದು ಕಂಪನಿಯೊಂದರ ಸಿಇಓ ಪಾತ್ರ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿರುವುದರಿಂದ ಈ ಪಾತ್ರ ತುಂಬಾ ಕಠಿಣವಾದದ್ದು. ಈ ಹಿಂದೆ ಯಾವತ್ತೂ ಇಷ್ಟು ಸ್ಟ್ರಾಂಗ್ ಮಹಿಳೆಯ ಪಾತ್ರ ಮಾಡುವ ಅವಕಾಶ ನನಗೆ ಸಿಕ್ಕಿಯೇ ಇಲ್ಲ. ಹಾಗಾಗಿ ಒಪ್ಪಿಕೊಂಡಿದ್ದೇನೆ ಎಂದರು.

ವೆಬ್ದುನಿಯಾವನ್ನು ಓದಿ