ಕನ್ನಡದಲ್ಲಷ್ಟೇ ನಟಿಸಿ ನೀತೂ ತಪ್ಪು ಮಾಡಿದ್ರಂತೆ!

PR
ಪರಭಾಷೆಯ ಅವಕಾಶಗಳು ಹುಡುಕಿಕೊಂಡು ಬಂದಾಗ ಕನ್ನಡ ಚಿತ್ರರಂಗದ ಮೇಲಿನ ಪ್ರೀತಿ ಅಡ್ಡ ಬಂತು. ಕನ್ನಡ ಚಿತ್ರರಂಗ ಕಡೆಗಣಿಸಲಾರಂಭಿಸಿದಾಗ ಪರಭಾಷೆಯ ಅವಕಾಶಗಳು ಮುಗಿದು ಹೋದವು!

ಇದು ಕಡಲತಡಿಯ ಸುಂದರಿ ನೀತೂ ಬವಣೆ. ಆಕೆ ನಟಿಸಿದ ಒಂದೇ ಒಂದು ಪರಭಾಷೆಯ ಚಿತ್ರವೆಂದರೆ, ಅದು ಮಲಯಾಳಂನ 'ಫೋಟೋಗ್ರಾಫರ್'.

ಅದು 'ಗಾಳಿಪಟ'ದಲ್ಲಿ ರಾಧಾಳಾಗಿ ಗೆದ್ದ ಹೊತ್ತು. ಸಾಕಷ್ಟು ಪರಭಾಷೆಯ ನಿರ್ಮಾಪಕರು ನೀತೂ ಹಿಂದೆ ಬಿದ್ದಿದ್ದರು. ಆದರೆ ಅದ್ಯಾವುದನ್ನೂ ನೀತೂ ಗಂಭೀರವಾಗಿ ಪರಿಗಣಿಸಲಿಲ್ಲ. ಕಾರಣ, ಕನ್ನಡ ಚಿತ್ರರಂಗದ ಮೇಲಿನ ಪ್ರೀತಿ. ಆಗ ಅದೇ ಸರಿ ಅನ್ನಿಸಿತ್ತು. ಆದರೆ ಈಗ ಅಂದು ಮಾಡಿರುವ ತಪ್ಪಿನ ಅರಿವಾಗಿದೆ.

ಕಾರಣ, ಕನ್ನಡ ಚಿತ್ರರಂಗ ಈಗ ಕ್ಯಾರೇ ಮಾಡುತ್ತಿಲ್ಲ. ಯಾವುದೋ ಆರಕ್ಕೇರದ ಮೂರಕ್ಕಿಳಿಯದ ಪಾತ್ರಗಳಷ್ಟೇ ಹುಡುಕಿಕೊಂಡು ಬರುತ್ತಿವೆ. ದೊಡ್ಡ ನಿರ್ದೇಶಕರು, ದೊಡ್ಡ ಬ್ಯಾನರುಗಳು ನೀತೂವನ್ನು ಪರಿಗಣಿಸುತ್ತಲೇ ಇಲ್ಲ. ಒಂದು ರೀತಿಯಲ್ಲಿ ನೀತೂ ಈಗ ಕನ್ನಡದಲ್ಲಿ ಆಟಕ್ಕುಂಟು, ಲೆಕ್ಕಕ್ಕಿಲ್ಲ ಹೀರೋಯಿನ್. ಹಾಗಾಗಿಯೇ ಪರಭಾಷೆಯ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದಾರೆ.

ಸದ್ಯ ಎರಡು ಚಿತ್ರಗಳು ನೀತೂ ಕೈಯಲ್ಲಿವೆ. ಮೊದಲನೆಯದ್ದು '90' ಖ್ಯಾತಿಯ ಲಕ್ಕಿ ಶಂಕರ್ ನಿರ್ದೇಶನದ 'ದೇವರಾಣೆ'. ಇದರಲ್ಲಿ ರವಿಶಂಕರ್ ನಾಯಕ. ನೀತೂ ಪಾತ್ರವೂ ಚೆನ್ನಾಗಿದೆಯಂತೆ. ತುಂಬಾ ಶ್ರಮವಹಿಸಿ ಮಾಡಿದ್ದೇನೆ, ಅಪಾರ ಭರವಸೆಯೂ ಇದೆ ಎನ್ನುತ್ತಾರೆ.

ಇನ್ನೊಂದು ಸುನಿಲ್ ಹುಬ್ಬಳ್ಳಿ ನಿರ್ದೇಶನದ 'ಪಾರು ಐ ಲವ್ ಯೂ'. ಈ ಚಿತ್ರದ ಪಾತ್ರ ನೀತೂಗೆ ಎಷ್ಟು ಇಷ್ಟವಾಗಿ ಬಿಟ್ಟಿದೆಯೆಂದರೆ, ಒಂದು ಹಂತದಲ್ಲಿ ಯೋಗರಾಜ್ ಭಟ್ಟರ 'ಗಾಳಿಪಟ'ದ ಪಾತ್ರವನ್ನೂ ಮೀರಿಸುವಂತಿದೆ.

ಬಿಡುಗಡೆಯಾದ ಕೊನೆಯ ಚಿತ್ರ 'ಯೋಗರಾಜ್ ಬಟ್'. ಬಾಕ್ಸಾಫೀಸಿನಲ್ಲಿ ಮುಗ್ಗರಿಸಿದರೂ, ವಿಮರ್ಶಕರ ಮಾತು ನೀತೂಗೆ ಖುಷಿ ಕೊಟ್ಟಿದೆ. ಅವರೀಗ ಮುಂದೇನಾಗುತ್ತದೆ ಎಂದು ಎದುರು ನೋಡುತ್ತಿದ್ದಾರೆ. ಅವರದ್ದು ನಿರೀಕ್ಷೆಗಳ ಮೇಲಿನ ಪಯಣ. ಜಯವಾಗಲಿ ಎಂದು ಹಾರೈಸಿ.

ವೆಬ್ದುನಿಯಾವನ್ನು ಓದಿ