ಕನ್ನಡದಲ್ಲಿ 'ಬಿಗ್ ಬಾಸ್' TOP: ಕಿಚ್ಚ ಸುದೀಪ್ ಫುಲ್ ಖುಷ್

ಶನಿವಾರ, 25 ಮೇ 2013 (13:47 IST)
PR
PR
ಸಾಕಷ್ಟು ಟೀಕೆಗಳ ನಡುವೆಯೂ 'ಕನ್ನಡದ ಬಿಗ್ ಬಾಸ್' ಕೀರ್ತಿ ಪತಾಕೆ ಎತ್ತರದಿಂದೆತ್ತರಕ್ಕೆ ಹಾರುತ್ತಿದೆ. ಕನ್ನಡದ ವಾಹಿನಿಗಳಲ್ಲಿ ಪ್ರಸಾರವಾಗುವ ಇತರ ಎಲ್ಲ ರಿಯಾಲಿಟಿ ಶೋಗಳನ್ನು ಹಿಂದಿಕ್ಕಿರುವ ಈ ಕಾರ್ಯಕ್ರಮ ಇದೀಗ ಅತ್ಯುತ್ತಮ ರೇಟಿಂಗ್‌ನೊಂದಿಗೆ ಕನ್ನಡದ ನಂ.1 ರಿಯಾಲಿಟಿ ಶೋ ಆಗಿ ಹೊರ ಹೊಮ್ಮಿದೆ!

ಕಳೆದ ವಾರ, ಅಂದರೆ ಮೇ 12ಕ್ಕೆ ಮುಕ್ತಾಯಗೊಂಡ ವಾರದಲ್ಲಿ ಬಿಗ್ ಬಾಸ್ ಪಾತಾಳಕ್ಕೆ ಕುಸಿದಿತ್ತು. ಅದಕ್ಕೆ ಕಾರಣ, ಒಂದು ಕಡೆ ಐಪಿಎಲ್, ಇನ್ನೊಂದೆಡೆ ರಾಜ್ಯ ವಿಧಾನಸಭಾ ಚುನಾವಣೆ. ಮತದಾನ ಮತ್ತು ಫಲಿತಾಂಶದ ಗುಂಗಿನಲ್ಲಿ ವೀಕ್ಷಕರು ಟಿವಿಯತ್ತ ಹೆಚ್ಚು ಗಮನ ಕೊಟ್ಟಿರಲಿಲ್ಲ.

ಆದರೆ ಆ ಕುಸಿತವನ್ನು ಮೇ 19ಕ್ಕೆ ಕೊನೆಗೊಂಡ ವಾರದಲ್ಲಿ ಬಿಗ್ ಬಾಸ್ ರಿಕವರ್ ಮಾಡಿಕೊಂಡಿದೆ. ಅದ್ಭುತ ಎಂದು ಹೇಳಿಕೊಳ್ಳುವಷ್ಟು 150.36 ಜಿಆರ್‌ಪಿ ರೇಟಿಂಗ್ ಪಡೆದುಕೊಂಡು ದಾಖಲೆ ನಿರ್ಮಿಸಿದೆ. ಮೂಲಗಳ ಪ್ರಕಾರ, ಇದು ಕನ್ನಡದ ಯಾವುದೇ ರಿಯಾಲಿಟಿ ಶೋ ಪಡೆದಿರುವ ರೇಟಿಂಗ್‌ಗಿಂತ ಹೆಚ್ಚು.

ಮೇ 13ರಿಂದ ಮೇ 16ರವರೆಗೆ, ಅಂದರೆ ಸೋಮವಾರದಿಂದ ಗುರುವಾರದವರೆಗೆ 89.74 ರೇಟಿಂಗ್ ಬಂದಿತ್ತು. ಕಿಚ್ಚ ಸುದೀಪ್ ಭಾಗವಹಿಸುವ ಶುಕ್ರವಾರದ ಸಂಚಿಕೆಗೆ 27.71 ಹಾಗೂ ಶನಿವಾರ 22.06 ರೇಟಿಂಗ್ ಸಿಕ್ಕಿತ್ತು. ಭಾನುವಾರ ಪ್ರಸಾರವಾಗುವ ಅನ್‌ಸೀನ್ ಎಪಿಸೋಡ್‌ಗೆ 10.85 ರೇಟಿಂಗ್ ಸಿಕ್ಕಿದೆ. ಇದರೊಂದಿಗೆ ಒಟ್ಟಾರೆ ರೇಟಿಂಗ್ 150.36 ತಲುಪಿದೆ.

ಬಿಗ್ ಬಾಸ್ ಅದ್ಭುತ ಸಾಧನೆ ಮಾಡಿರುವ ಬಗ್ಗೆ ಕಿಚ್ಚ ಸುದೀಪ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಾಯ್ಸ್ ಪೋಸ್ಟ್ ಮಾಡಿರುವ ಅವರು ಹೇಳಿರುವುದು ಇಷ್ಟು: ಬಿಗ್ ಬಾಸ್ ಟಿಆರ್‌ಪಿ ಬಂದಿದೆ. ತುಂಬಾ ಖುಷಿಯಾಗುತ್ತಿದೆ. ಅದ್ಭುತ ರೇಟಿಂಗ್, ಮೆಚ್ಚುಗೆ ಸಿಕ್ಕಿದೆ. ಬಿಗ್ ಬಾಸ್ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂಬ ಭರವಸೆಯಿತ್ತು. ಆದರೆ ಈ ಮಟ್ಟಕ್ಕೆ ಯಶಸ್ವಿಯಾಗುವ ಲೆಕ್ಕಾಚಾರ ನಮ್ಮಲ್ಲಿ ಇರಲಿಲ್ಲ. ನಮ್ಮ ಶ್ರಮಕ್ಕೆ ತಕ್ಕ ಫಲಿತಾಂಶ ಸಿಕ್ಕಿದೆ. ವೀಕ್ಷಕರಿಗೆ ಧನ್ಯವಾದಗಳು.

ಅಂದ ಹಾಗೆ, 'ಬಿಗ್ ಬಾಸ್' ಕಾರ್ಯಕ್ರಮ ಅತ್ಯುತ್ತಮ ರೇಟಿಂಗ್ ಪಡೆದಿರುವುದಷ್ಟೇ ಮೂಲಗಳಿಂದ ಬಂದಿರುವ ಮಾಹಿತಿ. ಆದರೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಡೆಸಿಕೊಡುತ್ತಿರುವ 'ಕನ್ನಡದ ಕೋಟ್ಯಧಿಪತಿ'ಯ ರೇಟಿಂಗ್ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಚುನಾವಣೆ ಮುಗಿದಿರುವುದರಿಂದ, ಐಪಿಎಲ್ ಮುಕ್ತಾಯ ಹಂತ ತಲುಪಿರುವುದರಿಂದ ಅಲ್ಲೂ ರೇಟಿಂಗ್ ಹೆಚ್ಚಿರಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ