ಕನ್ನಡ ಚಿತ್ರೋದ್ಯಮ ಬಂದ್; ಸ್ಟಾರುಗಳೂ ಬೀದಿಗೆ

SUJENDRA
ಅತಿರಥ ಮಹಾರಥರೂ ಬಂದ್‌ನಲ್ಲಿ ಪಾಲ್ಗೊಂಡಿರುವುದರಿಂದ ಗುರುವಾರ ನಡೆದ ಕನ್ನಡ ಚಿತ್ರೋದ್ಯಮ ಬಂದ್ ಭರ್ಜರಿ ಯಶಸ್ಸು ಕಂಡಿದೆ. ಕೇಂದ್ರ ಸರಕಾರ ಹೆಚ್ಚುವರಿಯಾಗಿ ವಿಧಿಸಿರುವ ಸೇವಾ ತೆರಿಗೆಯನ್ನು ರದ್ದು ಪಡಿಸಲೇಬೇಕು ಎಂದು ಈ ಸಂದರ್ಭದಲ್ಲಿ ಒಕ್ಕೊರಲಿನ ಬೇಡಿಕೆ ಮುಂದಿಡಲಾಯಿತು.

ಬೆಳಗ್ಗೆ 11 ಗಂಟೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಜಮಾವಣೆಗೊಂಡ ಕನ್ನಡ ಚಿತ್ರೋದ್ಯಮದ ನಿರ್ದೇಶಕರು, ನಿರ್ಮಾಪಕರು, ಕಲಾವಿದರು, ತಂತ್ರಜ್ಞರು ಘೋಷಣೆಗಳನ್ನು ಕೂಗುತ್ತಾ ರಾಜಭವನದತ್ತ ಕಾಲ್ನಡಿಗೆಯಲ್ಲಿ ಸಾಗಿದರು. ಈ ಸಂದರ್ಭದಲ್ಲಿ ಸಾಕಷ್ಟು ಅಭಿಮಾನಿಗಳೂ ಪ್ರತಿಭಟನಾಕಾರರ ಜತೆ ಸೇರಿಕೊಂಡರು.

ರಾಜಭವನ ತಲುಪಿದ ಪ್ರತಿಭಟನಾಕಾರರು, ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಕೇಂದ್ರ ಸರಕಾರವು ಸೇವಾ ತೆರಿಗೆ ವಿಧಿಸಲು ನಿರ್ಧರಿಸಿರುವುದು ಸರಿಯಲ್ಲ. ಈಗಾಗಲೇ ಕನ್ನಡ ಚಿತ್ರರಂಗ ಸಂಕಷ್ಟಕ್ಕೆ ಸಿಲುಕಿದೆ. ಈ ನಡುವೆ ಇಂತಹ ತೆರಿಗೆ ಹೊಡೆತ ಬಿದ್ದರೆ ನಿರ್ಮಾಪಕ ಬದುಕುವುದು ಸಾಧ್ಯವಿಲ್ಲ. ಇದು ಹೆಚ್ಚಿನ ಹೊರೆಯಾಗುತ್ತದೆ. ಹಾಗಾಗಿ ತಕ್ಷಣವೇ ಸರಕಾರ ತನ್ನ ನಿಲುವಿನಿಂದ ಹಿಂದಕ್ಕೆ ಸರಿಯಬೇಕು ಎಂದು ಲಿಖಿತ ಮನವಿ ಸಲ್ಲಿಸಲಾಯಿತು.

ಈ ಬಗ್ಗೆ ಮಾತನಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ವಿ. ಚಂದ್ರಶೇಖರ್, ಮನವಿಯನ್ನು ರಾಜ್ಯಪಾಲರಿಗೆ ಕೊಟ್ಟಿದ್ದೇವೆ. ಅವರು ಅದನ್ನು ಕೇಂದ್ರ ಸರಕಾರಕ್ಕೆ ತಲುಪಿಸುವ ವ್ಯವಸ್ಥೆ ಮಾಡಲಿದ್ದಾರೆ ಎಂದರು.

ಚಿತ್ರೋದ್ಯಮ ಬಂದ್...
ಸೇವಾ ತೆರಿಗೆ ವಿಧಿಸಲು ಮುಂದಾಗಿರುವ ಕೇಂದ್ರದ ನೀತಿಯನ್ನು ವಿರೋಧಿಸಿ ಕರ್ನಾಟಕದಾದ್ಯಂತ ಚಿತ್ರರಂಗದ ಎಲ್ಲಾ ವಹಿವಾಟುಗಳೂ ಗುರುವಾರ ಬಂದ್ ಆಗಿತ್ತು. ಯಾವುದೇ ಕನ್ನಡ ಸಿನಿಮಾಗಳ ಚಿತ್ರೀಕರಣ ನಡೆಯಲಿಲ್ಲ. ಮಲ್ಟಿಪ್ಲೆಕ್ಸ್‌ಗಳನ್ನು ಹೊರತುಪಡಿಸಿ ಚಿತ್ರಮಂದಿರಗಳೂ ಬಂದ್ ಆಗಿದ್ದವು.

ರಾಜ್ಯದಲ್ಲಿನ 800ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿನ ನೌಕರರು, ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸುವ ಕಲಾವಿದರು ಮತ್ತು ಸಾವಿರಾರು ದಿನಗೂಲಿ ನೌಕರರಿಗೆ ಗುರುವಾರ ರಜೆ ಘೋಷಿಸಲಾಗಿತ್ತು. ಯಾವುದೇ ಸ್ಟುಡಿಯೋಗಳು ಕೂಡ ಗುರುವಾರ ಕೆಲಸ ಮಾಡಲಿಲ್ಲ. ಈ ಬಂದ್‌ನಿಂದಾಗಿ ಕನ್ನಡ ಚಿತ್ರರಂಗಕ್ಕೆ ಸುಮಾರು 50 ಕೋಟಿ ರೂಪಾಯಿಗಳ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಸ್ಟಾರುಗಳ ದಂಡು...
ಪ್ರತಿಭಟನೆಗೆ ತಮ್ಮ ಅಹಂ ಬಿಟ್ಟು ಸ್ಟಾರುಗಳು ಬೀದಿಗಿಳಿದದ್ದು ವಿಶೇಷವಾಗಿತ್ತು. ಅಂಬರೀಷ್, ರವಿಚಂದ್ರನ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ಸುದೀಪ್, ಜಗ್ಗೇಶ್, ಶ್ರೀನಗರ ಕಿಟ್ಟಿ, ಯಶ್ ಮುಂತಾದ ನಾಯಕರು ಒಗ್ಗಟ್ಟಿನಿಂದ ಪ್ರತಿಭಟಿಸಿದರು. ತೆರಿಗೆ ರದ್ದು ಮಾಡಬೇಕು ಎಂದು ಸದಾ ಬ್ಯುಸಿಯಾಗಿರುತ್ತಿದ್ದ ನಟ-ನಟಿಯರು ಒತ್ತಾಯಿಸಿದರು.

ಆದರೆ ರಮ್ಯಾ ಸೇರಿದಂತೆ ಕನ್ನಡ ಚಿತ್ರರಂಗದ ಮುಂಚೂಣಿಯ ನಾಯಕಿಯರು ಪ್ರತಿಭಟನೆಗೆ ಬಂದಿರಲಿಲ್ಲ. ಭಾವನಾ, ಶ್ರುತಿ, ತಾರಾ ಮಾತ್ರ ಎದ್ದು ಕಾಣುತ್ತಿದ್ದರು. ಇವರೆಲ್ಲ ನಡುವೆ ಲೀಲಾವತಿ ತಮ್ಮ ಪುತ್ರ ವಿನೋದ್ ರಾಜ್ ಜತೆ ಕಾಲ್ನಡಿಗೆಯಲ್ಲಿ ಸಾಗಿದ್ದು ಗಮನ ಸೆಳೆಯಿತು.

ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ, ನಿರ್ದೇಶಕರ ಸಂಘದ ಅಧ್ಯಕ್ಷ ಎಂ.ಎಸ್. ರಮೇಶ್ ಸೇರಿದಂತೆ ಚಿತ್ರರಂಗಕ್ಕೆ ಸಂಬಂಧಪಟ್ಟ ಎಲ್ಲಾ ಸಂಘಗಳ ಪದಾಧಿಕಾರಿಗಳು ಪ್ರತಿಭಟನೆಗೆ ಕೈ ಜೋಡಿಸಿದರು. ನಿರ್ಮಾಪಕ-ನಿರ್ದೇಶಕರಾದ ಸಾರಾ ಗೋವಿಂದು, ಗಣೇಶ್, ಕರಿಸುಬ್ಬು, ಎಸ್. ನಾರಾಯಣ್, ರಾಕ್‌ಲೈನ್ ವೆಂಕಟೇಶ್, ಕೆ. ಮಂಜು, ರಘು ರಾಮ್, ರಮೇಶ್ ಯಾದವ್, ದಿನಕರ್ ತೂಗುದೀಪ್, ಅಶೋಕ್, ರಮೇಶ್ ಭಟ್, ಎಂ.ಎಸ್. ಉಮೇಶ್, ಸೂರಪ್ಪ ಬಾಬು ಸೇರಿದಂತೆ ನೂರಾರು ಮಂದಿ ಖ್ಯಾತನಾಮರು ಬೀದಿಗಿಳಿದಿದ್ದರು.

ರಕ್ಷಣೆ ನೀಡಲು ನಿಯೋಜನೆಗೊಂಡಿದ್ದ ಪೊಲೀಸರು ಸ್ಟಾರುಗಳ ಕೃಪೆಗೆ ಪಾತ್ರರಾಗಲು ಯತ್ನಿಸುತ್ತಿದ್ದುದು ಗಮನ ಸೆಳೆಯುತ್ತಿತ್ತು.

ವೆಬ್ದುನಿಯಾವನ್ನು ಓದಿ