ಕನ್ನಡ-ತಮಿಳಿನಲ್ಲಿ ಭೇದ-ಭಾವ ಮಾಡಲ್ಲ: ವಿಜಯ್

PR
ತನ್ನ ಹೊಸ ಚಿತ್ರ 'ವೇಲಾಯುಧಮ್' ಪ್ರಚಾರಕ್ಕೆಂದು ಬೆಂಗಳೂರಿಗೆ ಬಂದಿದ್ದ ತಮಿಳು ನಟ ವಿಜಯ್ ಹೇಳಿರುವ ಮಾತಿದು. ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ತಾನು ಕನ್ನಡ ಮತ್ತು ತಮಿಳು ಭಾಷೆಗಳನ್ನು ತಾರತಮ್ಯ ಭಾವನೆಯಿಂದ ನೋಡುವುದಿಲ್ಲ. ಬೆಂಗಳೂರು ನನ್ನ ಮನೆಯಿದ್ದಂತೆ ಎಂದರು.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಶನಿವಾರ ಬೆಂಗಳೂರಿನ ಪೂರ್ಣಿಮಾ ಚಿತ್ರಮಂದಿರಕ್ಕೆ ಬಂದಿದ್ದ ಅವರು, 'ಎಲ್ಲರೂ ಚೆನ್ನಾಗಿದ್ದೀರಾ?' ಅಂತ ಕನ್ನಡದಲ್ಲೇ ಮಾತು ಆರಂಭಿಸಿದರು. ನಂತರ ತಮಿಳಿನಲ್ಲಿ ಮಾತು ಮುಂದುವರಿಸುತ್ತಾ, ಬೆಂಗಳೂರು ನನಗೆ ಮನೆಯಿದ್ದಂತೆ; ಇಲ್ಲಿ ಅಪ್ಪಟ ಅಭಿಮಾನಿಗಳನ್ನು ನಾನು ನೋಡುತ್ತಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ವಿಜಯ್ ಅವರಿಗೆ ಮೈಸೂರು ಪೇಟ-ಹಾರ ತೊಡಿಸಿ ಸನ್ಮಾನ ಮಾಡಲಾಯಿತು. ಈ ಹಿಂದಿನ ತನ್ನೆಲ್ಲ ಚಿತ್ರಗಳಿಗಿಂತ ಇದು ಭಿನ್ನ, ಕಾದು ನೋಡಿ ಎಂದು ಕುತೂಹಲ ಹುಟ್ಟಿಸಿದರು.

'ವೇಲಾಯುಧಮ್' ಚಿತ್ರದ ಕರ್ನಾಟಕದ ವಿತರಣೆಯ ಹಕ್ಕುಗಳನ್ನು ಪಡೆದುಕೊಂಡಿರುವುದು ಕನ್ನಡದ ಖ್ಯಾತ ನಿರ್ಮಾಪಕ ಕೆ. ಮಂಜು. ಇವರಿಗೆ ಗುರು ದೇಶಪಾಂಡೆ ಸಾಥ್ ನೀಡಿದ್ದಾರೆ. ಅವರ ಪ್ರಕಾರ, ಚಿತ್ರ ಶತದಿನೋತ್ಸವ ಆಚರಿಸಿದ ನಂತರ ಮತ್ತೆ ವಿಜಯ್ ಬೆಂಗಳೂರಿಗೆ ಬರುತ್ತಾರೆ. ಹಾಗೆಂದು ಬಿಡುಗಡೆಗೆ ಮುಂಚೆಯೇ ಸೂಪರ್ ಹಿಟ್ ಎಂದು ಹೇಳಲಾಯಿತು.

ವೇಲಾಯುಧಮ್‌ನಲ್ಲಿ ವಿಜಯ್‌ಗೆ ಹನ್ಸಿಕಾ ಮೊತ್ವಾನಿ ಮತ್ತು ಜೆನಿಲಿಯಾ ನಾಯಕಿಯರು. ಎಂ. ರಾಜಾ ನಿರ್ದೇಶನದ ಚಿತ್ರವನ್ನು ನಿರ್ಮಿಸಿರುವುದು ಆಸ್ಕರ್ ರವಿಚಂದ್ರನ್.

ಬೆಂಗಳೂರಿನ ತನ್ನ ನೆನಪುಗಳನ್ನು ಇದೇ ಸಂದರ್ಭದಲ್ಲಿ ವಿಜಯ್ ಮೆಲುಕು ಹಾಕಲು ಯತ್ನಿಸಿದರು. ಈ ಹಿಂದೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯಕರಾಗಿದ್ದ ಜೋಗಯ್ಯ ಚಿತ್ರದ ಮುಹೂರ್ತಕ್ಕೆಂದು ಬಂದದ್ದು, ನಂತರ ತನ್ನ ಚಿತ್ರದ ಪ್ರಚಾರಕ್ಕಾಗಿ ನಗರಕ್ಕೆ ಬಂದದ್ದನ್ನು ಉಲ್ಲೇಖಿಸಿದರು. ಕರ್ನಾಟಕದ ಅಭಿಮಾನಿಗಳೆಂದರೆ ನನಗೆ ಒಂದು ಹಿಡಿ ಪ್ರೀತಿ ಹೆಚ್ಚು ಎಂದು ಕೈ ಬೀಸುತ್ತಾ ನೆರೆದಿದ್ದ ಅಭಿಮಾನಿಗಳಲ್ಲಿ ಪುಳಕ ಹುಟ್ಟಿಸಿದರು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ