ಕಲಾವಿದರ ಸಂಘಕ್ಕೆ ರೆಬೆಲ್ ಸ್ಟಾರ್ ಅಂಬರೀಷ್ ರಾಜೀನಾಮೆ!

MOKSHA
ರೆಬೆಲ್ ಸ್ಟಾರ್ ಅಂಬರೀಷ್ ಕಲಾವಿದರ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಮುಖ ನಟರಿಂದ ತನಗೆ ಸೂಕ್ತ ಸಹಕಾರ ಸಿಗುತ್ತಿಲ್ಲ ಎಂಬ ಕಾರಣದಿಂದ ಬೇಸತ್ತು ತಾನು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅಂಬರೀಷ್ ಹೇಳಿದ್ದು, ರಾಜೀನಾಮೆ ಪತ್ರವನ್ನು ನಿರ್ದೇಶಕರ ಸಂಘಕ್ಕೆ ರವಾನಿಸಿದ್ದಾರೆ.

ಕಳೆದ ಏಳು ವರ್ಷಗಳಿಂದ ಅಂಬರೀಷ್ ಕಲಾವಿದರ ಸಂಘಕ್ಕೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಹಲವು ನಟ ನಟಿಯರು ಗೈರು ಹಾಜರಾಗಿದ್ದು, ಕಾರ್ಯಕ್ರಮಕ್ಕೆ ಸೂಕ್ತ ಸಹಕಾರ ದೊರೆಯದಿದ್ದುದಕ್ಕೆ ಅಂಬರೀಷ್ ಅವರಿಗೆ ಬೇಸರವಿತ್ತು. ಅಲ್ಲದೆ, ತೆರೆಮರೆಯಲ್ಲಿ ಹಲವರು ಅಂಬರೀಷ್ ಅವರ ಅಧ್ಯಕ್ಷ ಸ್ಥಾನಕ್ಕೆ ಅಸಮಧಾನ ವ್ಯಕ್ತಪಡಿಸಿದ್ದರು ಎಂಬುದೇ ಈ ರಾಜೀನಾಮೆ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಂಬರೀಷ್, ರಾಜೀನಾಮೆ ನನ್ನ ಸ್ಪಷ್ಟ ಹಾಗೂ ಸ್ವಂತ ನಿರ್ಧಾರ. ನನಗೆ ಕಲಾವಿದರಿಂದ ಸೂಕ್ತ ಸಹಕಾರ ಸಿಗುತ್ತಿಲ್ಲ. ಇದರಿಂದ ಬೇಸರವಾಗಿದೆ. ಯಾವ ಕಾರ್ಯಕ್ರಮಕ್ಕೂ ನಟರು ಬರೋದಿಲ್ಲ. ನಾವೇ ಎಷ್ಟು ದಿನಾಂತ ಮಾಡಲಿ ಹೇಳಿ? ಅಷ್ಟೇ ಅಲ್ಲ, ಹಲವು ನಟರು ನನ್ನ ಅಧ್ಯಕ್ಷ ಸ್ಥಾನಕ್ಕೆ ನೇರವಾಗಿ ವಿರೋಧ ವ್ಯಕ್ತಪಡಿಸದಿದ್ದರೂ, ತೆರೆಮರೆಯಲ್ಲಿ ಈತನೇ ಎಷ್ಟು ವರ್ಷ ಅಧ್ಯಕ್ಷನಾಗಿರ್ತಾನೆ ಎಂಬರ್ಥದಲ್ಲಿ ಮಾತಾಡಿಕೊಳ್ಳುತ್ತಿದ್ದಾರೆ. ಅಂಬರೀಷೇ ಕಲಾವಿದರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಬೇಕಾಗಿಲ್ಲ. ನೂರಾರು ಕಲಾವಿದರಿದ್ದಾರೆ. ಹಿರಿಯರಿದ್ದಾರೆ. ಯಾರಾದರೊಬ್ಬರು ಅಧ್ಯಕ್ಷರಾದರೆ ಸಾಕು. ನಮಗೆಲ್ಲಾ ವಯಸ್ಸಾಯಿತು. ಇನ್ನು ನಮ್ಮ ಮಾತನ್ನು ಕೇಳೋರು ಯಾರಿದ್ದಾರೆ ಹೇಳಿ. ಹೊಸ ನಟರು ಬಂದಿದ್ದಾರೆ. ನಾವೆಲ್ಲ ಹಳಬರು. ನನಗಿನ್ನು ಸಂಘದ ಅಧ್ಯಕ್ಷ ಸ್ಥಾನದ ಕುರ್ಚಿ ಬೇಡ ಎಂದು ಭಾವುಕವಾಗಿ ನುಡಿದಿದ್ದಾರೆ.

ರಾಜ್ ಕುಟುಂಬದ ಗೈರು: ಡಿಸೆಂಬರ್ 13ರಂದು ನಡೆದ ಕಲಾವಿದರ ಸಂಘದ ರಾಜ್ಯೋತ್ಸವ ಸಮಾರಂಭಕ್ಕೆ ರಾಜ್ ಕುಮಾರ್ ಕುಟುಂಬದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್, ನಟರಾದ ವಿಷ್ಣುವರ್ಧನ್, ಉಪೇಂದ್ರ, ಗಣೇಶ್ ಮತ್ತಿತರ ಪ್ರಮುಖ ನಟರೇ ಗೈರುಹಾಜರಾಗಿದ್ದರು. ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಅಂಬರೀಷ್ ಅಂದೇ ರಾಜೀನಾಮೆ ನೀಡುವ ಮಾತನ್ನು ಆಡಿದ್ದರು.

ಕಲಾವಿದರ ಸಂಘಕ್ಕಾಗಿ ಹಿಂದಿನಿಂದಲೂ ದುಡಿದ ಅಂಬರೀಷ್, ಮಾಜಿ ಮುಖ್ಯಮಂತ್ರಿಗಳಾದ ಜೆ.ಎಚ್ ಪಟೇಲ್ ಅವರ ಆಡಳಿತವಿದ್ದಾಗ ಸಂಘಕ್ಕಾಗಿಯೇ ಒಂದು ಕಟ್ಟಡ ಬೇಕೆಂದು ಮನವಿ ಮಾಡಿ ಚಾಮರಾಜಪೇಟೆಯಲ್ಲಿ ಸರ್ಕಾರದ ನಿವೇಶವನ್ನು ಒದಗಿಸಿಕೊಟ್ಟಿದ್ದರು. ಅಲ್ಲದೆ 60 ಲಕ್ಷ ರೂ ವೆಚ್ಚದಲ್ಲಿ ಕಟ್ಟಡವನ್ನು ಕಟ್ಟಿಸಿ ಅದು ಅರ್ಧ ಭಾಗ ಪೂರ್ಣಗೊಂಡಿತ್ತು. ಅಲ್ಲದೆ ಸಂಘದಲ್ಲಿ ಯಾವುದೇ ಕಲಾವಿದರ ತೊಂದರೆ ತಾಪತ್ರಯಗಳು ಎದ್ದರೂ ಅವರು ಮುಂದೆ ನಿಂತು ಪರಿಹರಿಸುತ್ತಿದ್ದರು ಎಂಬ ಮಾತಿತ್ತು. ಮೊನ್ನೆ ಐಂದ್ರಿತಾ ಹಾಗೂ ನಾಗತಿಹಳ್ಳಿ ಪ್ರಸಂಗವನ್ನು ಬಗೆಹರಿಸುವಲ್ಲಿ ಅವರು ಯಶಸ್ವಿಯಾಗಿದ್ದರು. ಸಂಘದಲ್ಲಿ ಪ್ರತಿಯೊಬ್ಬರಿಗೂ ಬೇಕಾಗಿದ್ದ ಅಂಬಿ ಅವರ ದಿಢೀರ್ ನಿರ್ಧಾರಕ್ಕೆ ಚಿತ್ರರಂಗ ಆಶ್ಚರ್ಯ ವ್ಯಕ್ತಪಡಿಸಿದೆ. ಹಾಗೂ ಶೀಘ್ರದಲ್ಲೇ ಚಿತ್ರರಂಗದ ಗಣ್ಯರೆಲ್ಲರೂ ಒಂದಾಗಿ ಅಂಬರೀಷ್ ಮನೆಗೆ ತೆರಳಿ ಮತ್ತೆ ಅವರನ್ನು ಅಧ್ಯಕ್ಷ ಸ್ಥಾನದಲ್ಲೇ ಮುಂದುವರಿಯಲು ಮನವೊಲಿಸಲು ತೀರ್ಮಾನಿಸಿದೆ.

ಚಿತ್ರರಂಗದ ಪ್ರತಿಕ್ರಿಯೆ:

ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್: ಅಂಬರೀಷ್ ಅವರು ಹಿರಿಯರು. ಅವರಂಥ ಮಾರ್ಗದರ್ಶಕರು ನಮಗೆ ಬೇಕು. ಅಣ್ಣಾವ್ರ ನಿಧನದ ನಂತರ ಚಿತ್ರರಂಗದಲ್ಲಿ ಅಂಬರೀಷ್, ವಿಷ್ಣುವರ್ಧನ್ ಮೊದಲಾದ ಕೆಲವೇ ಕೆಲವು ಹಿರಿಯರಿದ್ದಾರೆ. ಅವರ ಅನುಭವ ದೊಡ್ಡದು. ಇಂಥವರು ನಮಗೆ ಸದಾ ಬೇಕು. ಅಂಬರೀಷ್ ಅವರು ಕಲಾವಿದರ ಸಂಘಕ್ಕೆ ಸಾಕಷ್ಟು ದುಡಿದಿದ್ದಾರೆ. ಅವರಿಗೆ ನೋವಾಗಿರುವುದು ಸಹಜ. ಎಂಪಿ ಸ್ಥಾನವನ್ನೇ ತ್ಯಾಗ ಮಾಡಿರುವ ಅವರಿಗೆ ಕಲಾವಿದರ ಸಂಘದ ಅಧ್ಯಕ್ಷ ಸ್ಥಾನದ ತ್ಯಾಗ ದೊಡ್ಡದೇನಲ್ಲ. ಅವರಿಗೆ ಕಲಾವಿದರ ಸಂಘದ ಅಧ್ಯಕ್ಷ ಸ್ಥಾನದಲ್ಲಿರಬೇಕಾದ ಅಗತ್ಯವಿಲ್ಲ. ಆದರೆ ನಮಗೆ ಅವರು ಅಧ್ಯಕ್ಷ ಸ್ಥಾನದಲ್ಲಿರಬೇಕಾದ ಅಗತ್ಯ ಇದೆ. ಅವರನ್ನು ಮನವೊಲಿಸಿ ರಾಜೀನಾಮೆ ಹಿಂಪಡೆಯಲು ಮನವಿ ಮಾಡುತ್ತೇವೆ ಎಂದು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಪ್ರತಿಕ್ರಿಯಿಸಿದ್ದಾರೆ.

ಹಿರಿಯ ನಟ ದೊಡ್ಡಣ್ಣ: ಈ ಸುದ್ದಿ ಕೇಳಿ ನನಗೆ ಶಾಕ್ ಆಗಿದೆ. ಅಂಬರೀಷ್ ಅವರಿಗೆ ಬೇಸರವಾಗಿದ್ದು ಸಹಜ. ಕಲಾವಿದರ ಸಂಘಕ್ಕೆ ಅಂಬರೀಷ್ ಸಾಕಷ್ಟು ದುಡಿದಿದ್ದಾರೆ. ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅವರು ಸಾಕಷ್ಟು ನಿರೀಕ್ಷಿಸಿದ್ದರು. ಆದರೆ ಈ ಬಾರಿ ಸೂಕ್ತವಾಗಿ ಕಲಾವಿದರು ಸ್ಪಂದಿಸಲಿಲ್ಲ. ಅದಕ್ಕೆ ಅವರು ಇಂಥ ನಿರ್ಧಾರ ತೆಗೆದುಕೊಳ್ಳಬಾರದಿತ್ತು. ಅದನ್ನೆಲ್ಲಾ ಒಂದೆಡೆ ಕೂತು ಮಾತಾಡಿ ಪರಿಹರಿಸಬೇಕು. ನಾವೆಲ್ಲಾ ಒಟ್ಟಾಗಿ ಅವರನ್ನು ಮನ ಒಲಿಸುತ್ತೇವೆ ಎಂದು ಹಿರಿಯ ನಟ ದೊಡ್ಡಣ್ಣ ಹೇಳಿದ್ದಾರೆ.

ನಿರ್ದೇಶಕ ಪ್ರೇಮ್: ನನಗೆ ಈ ಸುದ್ದಿ ಕೇಳಿ ಆಘಾತವಾಯ್ತು. ಅವರನ್ನು ರಾಜೀನಾಮೆ ಕೊಡಲು ಬಿಡೋದೇ ಇಲ್ಲ. ಅವರು ಚಿತ್ರರಂಗದ ಬೆನ್ನೆಲುಬು. ಎಂಪಿ ಆಗುವ ಮೊದಲೂ, ನಂತರವೂ ಅವರು ಕಲಾವಿದರ ಸಂಘಕ್ಕೆ ಸಾಕಷ್ಟು ಕೆಲಸ ಮಾಡಿದ್ದಾರೆ. ಚಿತ್ರರಂಗಕ್ಕೆ ಯಾವತ್ತೂ ದೊಡ್ಡವರ ಅಗತ್ಯ ಇದೆ. ಅಂಬರೀಷ್ ಹಿರಿಯರು. ಅವರಿಗೆ ಉದ್ಯಮದ ಬಗ್ಗೆ ಸಾಕಷ್ಟು ಅನುಭವ ಇದೆ. ಅವರ ಬಗ್ಗೆ ಅಪಸ್ವರ ಎತ್ತಿದವರು ಯಾರು ಅಂತ ಗೊತ್ತಿಲ್ಲ. ಕೂಡಲೇ ಅವರ ಮನೆಗೆ ಹೋಗಿ ಸಂಜೆಯೊಳಗೆ ಮನವೊಲಿಸುವ ಪ್ರಯತ್ನ ಮಾಡುತ್ತೇವೆ ಎಂದರು ಜೋಗಿ ಖ್ಯಾತಿಯ ನಿರ್ದೇಶಕ ಪ್ರೇಮ್.

ವೆಬ್ದುನಿಯಾವನ್ನು ಓದಿ