ಕಾಸರವಳ್ಳಿಗೆ ಪ್ರಶಸ್ತಿ: ಕಿರೀಟಕ್ಕೆ ಮತ್ತೊಂದು ಗರಿ

MOKSHA
ಗಿರೀಶ್ ಕಾಸರವಳ್ಳಿಯವರಿಗೆ ಪ್ರಶಸ್ತಿಯೊಂದು ಸಿಕ್ಕಿತಂತೆ ಎಂದು ಹೇಳಿದರೆ ವಿಶೇಷವೇನೂ ಅನ್ನಿಸದು. ಏಕೆಂದರೆ ಗಿರೀಶ್ ಕಾಸರವಳ್ಳಿ ಎಂಬ ಹೆಸರಿಗೆ ಪ್ರಶಸ್ತಿ ಎಂಬ ಪದ, ಪರ್ಯಾಯ ಪದವೇ ಆಗಿಬಿಟ್ಟಿದೆ ಎಂದರೆ ಅದು ಅತಿಶಯೋಕ್ತಿಯೇನಲ್ಲ.

ಯಾವುದಾದರೊಂದು ವರ್ಷ ಗಿರೀಶರ ಚಿತ್ರವೊಂದು ಸಿದ್ಧವಾಯಿತೆಂದರೆ, ಈ ವರ್ಷ ಕನ್ನಡಕ್ಕೊಂದು ಸ್ವರ್ಣಕಮಲ ಅಥವಾ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಗ್ಯಾರಂಟಿ ಎಂದು ಕಣ್ಣು ಮುಚ್ಚಿಕೊಂಡು ಹೇಳುವುದು ವಾಡಿಕೆಯಾಗಿತ್ತು. ಅದು ನಿಜವಾಗುತ್ತಿತ್ತು ಕೂಡಾ. ಚಲನಚಿತ್ರವನ್ನು ಕೇವಲ ಹಣ ಮಾಡುವ ದಂಧೆಯಂತೆ ಭಾವಿಸದೆ ಅದನ್ನೊಂದು ಕಲೆಯನ್ನಾಗಿ ಪ್ರೀತಿಸುವ ಅವರ ಬದ್ಧತೆಯೇ ಗಿರೀಶರಿಗೆ ಇಷ್ಟೊಂದು ಮಾನ್ಯತೆ ಹಾಗೂ ಗೌರವವನ್ನು ನೀಡಿದೆ ಎನ್ನಬಹುದೇನೋ.

ಗಿರೀಶರಿಗೆ ದಕ್ಷಿಣ ಏಷ್ಯಾ ಸಿನಿಮಾ ಪ್ರತಿಷ್ಠಾನದ 2009ರ ಸಾಲಿನ ಕ್ರಿಸ್ಟಲ್ ಗ್ಲೋಬ್ ಪ್ರಶಸ್ತಿ ದೊರಕಿರುವುದಕ್ಕೆ ಇಷ್ಟೆಲ್ಲಾ ಹೇಳಬೇಕಾಯಿತು. ಘಟಶ್ರಾದ್ಧ, ಗುಲಾಬಿ ಟಾಕೀಸ್, ತಾಯಿ ಸಾಹೇಬ, ನಾಯಿ ನೆರಳು, ಕುಬಿ ಮತ್ತು ಇಯಾಲ, ದ್ವೀಪ.. ಹೀಗೆ ಅವರ ಚಿತ್ರಗಳ ಹೆಸರುಗಳನ್ನು ಹೇಳುತ್ತಾ ಹೋದರೆ, ದೀಪಾವಳಿಯ ಸಂದರ್ಭದಲ್ಲಿ ಒಂದು ದೀಪದಿಂದ ಮತ್ತೊಂದು ದೀಪವನ್ನು ಹಚ್ಚಿಕೊಳ್ಳುತ್ತಲೇ ಹೋಗುವ ಅನುಭವ-ಅನುಭಾವ ಎರಡೂ ಆಗುತ್ತದೆ. ಗಿರೀಶರ ಚಿತ್ರ-ದೀಪಾವಳಿ ಹೀಗೇ ಮುಂದುವರೆಯಲಿ. ಬೆಳ್ಳಿತೆರೆಯ ಮೇಲೆ ಬಂಗಾರದ ಕಾಂತಿಯನ್ನು ಚಿಮ್ಮಿಸಲಿ.

ವೆಬ್ದುನಿಯಾವನ್ನು ಓದಿ