ಕಿಚ್ಚ ಸುದೀಪ್‌ಗೆ 'ಬಚ್ಚನ್'ನಲ್ಲಿ ಹೊಸ ಗೆಟಪ್: ಸ್ಟೈಲಿಶ್ ಜುಟ್ಟು..!

PR
ಬಹುಶಃ ಇತ್ತೀಚಿನ ವರ್ಷಗಳಲ್ಲಿ ಈ ರೀತಿ ಹೇರ್ ಸ್ಟೈಲ್ ಬದಲಾವಣೆ ಕಿಚ್ಚ ಸುದೀಪ್ ಮಾತ್ರವಲ್ಲ, ಕನ್ನಡದ ಯಾವುದೇ ಪ್ರಮುಖ ನಟರು ಮಾಡಿದಂತಿಲ್ಲ. ಅಂತಹ ಬದಲಾವಣೆಯೊಂದು ಸುದೀಪ್ ಹೆಸರಲ್ಲಿ ದಾಖಲಾಗುತ್ತಿದೆ. ಮುಂದಿನ ಚಿತ್ರದಲ್ಲವರು ಜುಟ್ಟುಧಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ!

ಶಶಾಂಕ್ ನಿರ್ದೇಶನದ 'ಬಚ್ಚನ್' ಸ್ಟೈಲಿಶ್ ಆಗಿ ಮೂಡಿ ಬರುತ್ತಿರುವ ಚಿತ್ರ ಎಂಬ ಮಾತು ಕೇಳಿ ಬರುತ್ತಿದೆ. ಈ ನಡುವೆ ಚಿತ್ರದ ನಾಯಕ ಸುದೀಪ್ ಪಾತ್ರಕ್ಕೆ ಜುಟ್ಟು ಗೆಟಪ್ ಕೊಟ್ಟಿದ್ದಾರೆ ಶಶಾಂಕ್. ಜುಟ್ಟೆಂದರೆ ಮಾಮೂಲಿ ಜುಟ್ಟಲ್ಲ, ಸ್ಟೈಲಿಶ್ ಜುಟ್ಟು. ಒಂದು ರೀತಿಯಲ್ಲಿ ತುಂಬಾ ಭಿನ್ನವಾಗಿ ಕಾಣುವ ಜುಟ್ಟು.

ಮೂಲಗಳ ಪ್ರಕಾರ, ಸುದೀಪ್‌ಗೆ ಈ ಜುಟ್ಟು ಇಡೀ ಚಿತ್ರದಲ್ಲಿ ಇರುವುದಿಲ್ಲ. ಯಾವುದೋ ಒಂದು ಭಾಗದಲ್ಲಿ ಮಾತ್ರ ಕಾಣ ಸಿಗುತ್ತದೆ. ಸುದೀಪ್‌ಗೆ ಈ ಲುಕ್ ತುಂಬಾ ಚೆನ್ನಾಗಿ ಕಾಣುತ್ತಿರುವುದರಿಂದ, ಹೇರ್ ಸ್ಟೈಲ್ ಬದಲಾವಣೆ ತಂತ್ರ ಫಲಿಸಿದಂತೆ ಕಾಣುತ್ತಿದೆ. ಸದ್ಯ ಶೂಟಿಂಗ್ ಫೋಟೊ ನೋಡಿರುವ ಅಭಿಮಾನಿಗಳು ಖುಷಿಯಾಗಿದ್ದು, ಸಿನಿಮಾ ಕೂಡ ಇಷ್ಟವಾಗಬಹುದು ಎಂಬ ನಿರೀಕ್ಷೆಯಲ್ಲಿದೆ ಚಿತ್ರತಂಡ.

ಅಂದ ಹಾಗೆ, ಈ ಜುಟ್ಟು ಇತ್ತೀಚೆಗಷ್ಟೇ ಬಹಿರಂಗವಾಗಿತ್ತು. ಜೋಯಾಲುಕ್ಕಾಸ್ ಆಭರಣ ಸಂಸ್ಥೆಯ ಕನ್ನಡ ಜಾಹೀರಾತಿನಲ್ಲಿ ಸುದೀಪ್ ಜುಟ್ಟು ಅವತಾರದಲ್ಲಿದ್ದರು. ಇದನ್ನು ನೋಡಿದವರು, ಜುಟ್ಟು ಬಿಟ್ಟಿರೋದು ಜಾಹೀರಾತಿಗೆ ಇರಬಹುದು ಎಂದು ಅಂದಾಜಿಸಿದ್ದರು. ಆದರೆ ನಂತರ ತಿಳಿದು ಬಂದದ್ದೇನೆಂದರೆ, 'ಬಚ್ಚನ್' ಚಿತ್ರದಲ್ಲಿ ಜುಟ್ಟು ಇರುವ ಸನ್ನಿವೇಶವಿತ್ತು. ಅದೇ ಶೈಲಿಯನ್ನು ಜಾಹೀರಾತಿನಲ್ಲೂ ಬಳಸಲಾಗಿದೆ ಅನ್ನೋದು.

ಅಂತೂ ಕೊನೆಗೂ ಕನ್ನಡದ ಪ್ರಮುಖ ನಟರೊಬ್ಬರು ಹೈರ್ ಸ್ಟೈಲ್ ಬದಲಾವಣೆಗೆ ಒಗ್ಗಿಕೊಂಡಿರುವುದು ಸ್ಪಷ್ಟ. ಈ ಹಿಂದೆ ದರ್ಶನ್ 'ಪೊರ್ಕಿ' ಚಿತ್ರದಲ್ಲಿ ಕೇಶ ವಿನ್ಯಾಸ ಬದಲಿಸಿಕೊಂಡಿದ್ದರು. ಅವರನ್ನು ಬಿಟ್ಟರೆ ಕನ್ನಡದ ಬಹುತೇಕ ಸ್ಟಾರ್ ನಟರು ಅದೇ ಹೇರ್ ಸ್ಟೈಲ್‌ನಲ್ಲಿ ಮುಂದುವರಿಯುತ್ತಿದ್ದಾರೆ.

'ಬಚ್ಚನ್' ಚಿತ್ರದಲ್ಲಿ ಸುದೀಪ್‌ಗೆ ಭಾವನಾ, ತುಲಿಪ್ ಜೋಶಿ ಮತ್ತು ಪಾರುಲ್ ಯಾದವ್ ಮೂವರು ನಾಯಕಿಯರು. ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ, ಶೇಖರ್ ಚಂದ್ರು ಛಾಯಾಗ್ರಹಣವಿದೆ. ಚಿತ್ರೀಕರಣ ಅಂತಿಮ ಹಂತಕ್ಕೆ ಬಂದಿದ್ದು, ಒಂದೆರಡು ತಿಂಗಳಲ್ಲಿ ತೆರೆಗೆ ಬರುವ ನಿರೀಕ್ಷೆಗಳಿವೆ.

ವೆಬ್ದುನಿಯಾವನ್ನು ಓದಿ